Advertisement
ಆರೋಪಿಯು ಈ ಹಿಂದೆ ಪೇಟಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿಗಳು ಹಾಗೂ ಸಾರ್ವಜನಿಕರ ಬಳಿ ತೆರಳಿ ಪೇಟಿಎಂ ಬ್ಯುಸಿನೆಸ್ ಅಪ್ಲಿಕೇಶನ್ ಅನ್ನು ಇನ್ ಸ್ಟಾಲ್ ಮಾಡಿದರೆ ಅದರಿಂದ ಸಿಗುವ ಲಾಭಗಳ ಬಗ್ಗೆ ವಿವರಿಸುತ್ತಿದ್ದ. ಇನ್‌ಸ್ಟಾಲ್ ಮಾಡುವ ಬಗ್ಗೆ ಮಾಹಿತಿ ಇಲ್ಲದವರ ಮೊಬೈಲ್ ಪಡೆದು ತಾನೇ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ, ಪಾಸ್‌ವರ್ಡ್ ನೀಡುತ್ತಿದ್ದ. ಅವರ ಮೊಬೈಲ್ ನಂಬರ್‌ಗಳನ್ನು ಹಾಗೂ ಆéಪ್‌ಗೆ ಕೊಟ್ಟಿ ರುವ ಪಾಸ್ ವರ್ಡ್‌ಗಳನ್ನು ಸಂಗ್ರಹಿಸಿಟ್ಟಿಕೊಂಡಿದ್ದ. ಒಂದು ವರ್ಷದ ಹಿಂದೆ ಪೇಟಿಎಂ ಕಂಪನಿಯಲ್ಲಿ ಕೆಲಸ ತೊರೆದಿದ್ದ. ಈ ಹಿಂದೆ ತಾನು ಸಂಗ್ರಹಿಸಿಟ್ಟುಕೊಂಡಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿ ಪೇಟಿಎಂ ಆ್ಯಪ್‌ನಲ್ಲಿ ಪೇಟಿಎಂ ಫಾರ್ ಬ್ಯುಸಿನೆಸ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಕ್ಯಾಶ್ಬ್ಯಾಕ್ಬರುವುದಾಗಿ ನಂಬಿಸುತ್ತಿದ್ದ. ಕ್ಯಾಶ್‌ಬ್ಯಾಕ್ ಬರಲು ಕನಿಷ್ಠ ಡಿಪಾಸಿಟ್ ಇಡಬೇಕು ಎನ್ನುತ್ತಿದ್ದ. ಆತನ ಮಾತಿಗೆ ಮರುಳಾಗಿ ಹಣ ಡಿಪಾಸಿಟ್ ಇಟ್ಟರೆ, ಪಾಸ್ ವರ್ಡ್ ಬಳಸಿ ಅವರ ಖಾತೆಯಿಂದ ಕೂಡಲೇ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ.
2021 ಡಿ.11ರಂದು ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ್ದ ಆರೋಪಿ ತಾನು ಪೇಟಿಎಂ ಎಕ್ಸಿಕ್ಯೂಟಿವ್ ರಾಜೇಶ್ ಎಂದು ಪರಿಚಯ ಮಾಡಿಕೊಂಡಿದ್ದ. ಪೇಟಿಎಂ ಫಾರ್ ಬ್ಯುಸಿನೆಸ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಕ್ಯಾಷ್‌ಬ್ಯಾಕ್ ಬರುತ್ತದೆ. ಇದಕ್ಕೆ 20 ಸಾವಿರ ರೂ. ಡೆಪಾಸಿಟ್ ಮಾಡಬೇಕು ಎಂದಿದ್ದ. ಇದನ್ನು ನಂಬಿದ ದೂರುದಾರರು ಆಧಾರ್ ಕಾರ್ಡ್, ಪಾನ್ ಕಾರ್ಡ್ ಮಾಹಿತಿಯನ್ನು ಆರೋಪಿಗೆ ಕೊಟ್ಟಿದ್ದಾರೆ. ಈ ಮಾಹಿತಿ ಮೂಲಕ ದೂರುದಾರರ ಬ್ಯಾಂಕ್ ಖಾತೆಯಿಂದ 19 ಸಾವಿರ ರೂ.ನ್ನು ಆರೋಪಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ನಂತರ ದೂರುದಾರರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹಣ ಕಳೆದುಕೊಂಡವರು ಈಶಾನ್ಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಾಂತ್ರಿಕ ಕಾರ್ಯಾಚರಣೆ ನಡೆಸಿದ ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.