ಬೆಂಗಳೂರು: ಬಾಡಿಗೆ ಮನೆ ಮಾಲೀಕರೇ ಎಚ್ಚರ! ಬಾಡಿಗೆಗೆ ಮನೆ ನೋಡುವ ಸೋಗಿನಲ್ಲಿ ಬಂದು ಮೈಮೇಲಿದ್ದ ಚಿನ್ನಾಭರಣ ದೋಚುವ ಕಳ್ಳರು ನಗರದಲ್ಲಿದ್ದಾರೆ.
ಬಾಡಿಗೆ ಮನೆ ಕೇಳವ ನೆಪದಲ್ಲಿ ಮನೆ ತೋರಿಸಲು ಮಾಲೀಕರು ಒಳ ಹೋಗುತ್ತಿದ್ದಂತೆ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚುತ್ತಿದ್ದ ಕ್ಯಾಬ್ ಚಾಲಕ ಜ್ಞಾನಭಾರತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ತಮಿಳುನಾಡು ಮೂಲದ ಕಿರಣ್ ಕುಮಾರ್(36) ಬಂಧಿತ. ಆರೋಪಿಯಿಂದ 9 ಲಕ್ಷ ರೂ. ಮೌಲ್ಯದ 220 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಆರೋಪಿ ಕ್ಯಾಬ್ ಚಾಲಕನಾಗಿದ್ದು, ಜ್ಞಾನಭಾರತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈ ಮಧ್ಯೆ ವಿಚ್ಛೇಧಿತ ಮಹಿಳೆ ಜತೆ ಆತ್ಮೀಯತೆ ಹೊಂದಿದ್ದಾನೆ. ಈಕೆಯಿಂದಲೂ ಖರ್ಚಿಗೆಂದು ತಿಂಗಳಿಗೆ ಸಾವಿರಾರು ರೂ. ಪಡೆಯುತ್ತಿದ್ದ. ಇದರೊಂದಿಗೆ ಆರೋಪಿ ಸರ ಕಳವು, ಚಿನ್ನಾಭರಣ ಕಳವು ಮಾಡಿಕೊಂಡು ಮೋಜಿನ ಜೀವನ ನಡೆಸುತ್ತಿದ್ದಾನೆ. ಕೆಲ ದಿನಗಳ ಹಿಂದೆ ಸ್ನೇಹಿತೆಯ ಜತೆ ಬಾಡಿಗೆ ಮನೆ ನೋಡಲು ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದ್ದಾನೆ. ಈ ವೇಳೆ ಸರ್ ಎಂ.ವಿ.ಲೇಔಟ್‌ನಲ್ಲಿ ವೃದ್ಧರೊಬ್ಬರಿಗೆ ಸೇರಿದ ಬಾಡಿಗೆ ಮನೆ ನೋಡಲು ಹೋಗಿದ್ದಾರೆ. ಈ ವೇಳೆ ವೃದ್ಧೆ ಒಬ್ಬರೇ ಇರುವುದನ್ನು ಅರಿತ ಆರೋಪಿ, ಫೆ.7ರಂದು ಮತ್ತೆ ಬಂದು ಮನೆ ನೋಡಬೇಕೆಂದು ವೃದ್ಧೆಯನ್ನು ಬಾಡಿಗೆ ಮನೆಗೆ ಕರೆದೊಯ್ದಿದ್ದಾನೆ. ಮನೆಯೊಳಗೆ ಹೋಗುತ್ತಿದ್ದಂತೆ ಬಾಗಿಲು ಹಾಕಿ, ವೃದ್ಧೆಯ ಕೈ,ಕಾಲು ಕಟ್ಟಿ, ಆಕೆಯ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ನಂತರ ಸ್ಥಳೀಯರು ವೃದ್ಧೆಯ ಕೂಗಾಟ ಕೇಳಿ ಸ್ಥಳಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ : ಕಾಶ್ಮೀರದಲ್ಲಿ ಭಾರೀ ಹಿಮಪಾತ: ವಿಮಾನಗಳು ರದ್ದು, ಹೆದ್ದಾರಿ ಬಂದ್
ಆರೋಪಿ ಕಿರಣ್ ಕುಮಾರ್ ಕೃತ್ಯ ಆತನ ಸ್ನೇಹಿತೆಗೆ ಗೊತ್ತಿಲ್ಲ. ಈತನ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾಳೆ. ಕಳವು ವಸ್ತುಗಳನ್ನು ಆರೋಪಿ ಸ್ನೇಹಿತರ ಮೂಲಕ ಅಡಮಾನ ಇಡಿಸಿ ಮೋಜು-ಮಸ್ತಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.