Advertisement

Bengaluru: ಸ್ನೇಹಿತನ ಕೊಂದು ತುಂಡರಿಸಿ ಮೋರಿಗೆ ಎಸೆದ!

11:02 AM Jun 09, 2024 | Team Udayavani |

ಬೆಂಗಳೂರು: ಪತ್ನಿ ಜತೆ ಅಕ್ರಮ ಸಂಬಂಧ ಹಾಗೂ ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನು ಹತ್ಯೆಗೈದು, ಬಳಿಕ ಮೃತದೇಹವನ್ನು ಐದಾರು ತುಂಡುಗಳನ್ನಾಗಿ ಮಾಡಿ ಬಿಸಾಡಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ವಿಜಿನಾಪುರ ನಿವಾಸಿ ಮಾಧವ ರಾವ್‌ (41) ಬಂಧಿತ ಆರೋಪಿ. ಈತ ಮೇ 28ರಂದು ಸ್ನೇಹಿತ ಶ್ರೀನಾಥ್‌ನನ್ನು ಹತ್ಯೆಗೈದು, ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಬೆಳತ್ತೂರು ಬಳಿಯ ಮೋರಿಯಲ್ಲಿ ಎಸೆದು ಪರಾರಿಯಾಗಿದ್ದ. ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತೂಂದೆಡೆ ಸಂಪಿಗೆಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ಎಂ.ಪ್ರಶಾಂತ್‌, ತಮ್ಮ ಠಾಣೆಯಲ್ಲಿ ಶ್ರೀನಾಥ್‌ ನಾಪತ್ತೆ ಬಗ್ಗೆ ದಾಖಲಾಗಿದ್ದ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿದಾಗ ಆರೋಪಿ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಭೀಕರ ಕೊಲೆ ರಹಸ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದರು.

ಮೇ 28ರಂದು ಕೆಲಸಕ್ಕೆಂದು ಹೋಗಿದ್ದ ಶ್ರೀನಾಥ್‌ ವಾಪಸ್‌ ಬಂದಿಲ್ಲ. ಅದರಿಂದ ಗಾಬರಿಗೊಂಡ ಆತನ ಪತ್ನಿ ಎಲ್ಲೆಡೆ ಹುಡುಕಾಟ ನಡೆಸಿ, ಮೇ 29ರಂದು ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದರು.

ಏನಿದು ಭೀಕರ ಕೊಲೆ ರಹಸ್ಯ?: ಮಾರ್ಗದರ್ಶಿ ಚಿಟ್‌ ಫ‌ಂಡ್‌ನ‌ ಬಸವೇಶ್ವರನಗರ ಶಾಖೆಯಲ್ಲಿ ಡೆವಲಪ್‌ಮೆಂಟ್‌ ಅಧಿಕಾರಿಯಾಗಿದ್ದ ಶ್ರೀನಾಥ್‌, ಸಂಪಿಗೆಹಳ್ಳಿಯ ಅಂಜನಾದ್ರಿ ಲೇಔಟ್‌ನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ವಾಸವಾಗಿದ್ದ. ಈ ನಡುವೆ 2 ವರ್ಷಗಳ ಹಿಂದೆ ಹಾಲೋಬ್ರಿಕ್ಸ್‌ ಕೆಲಸ ಮಾಡುತ್ತಿದ್ದ ಮಾಧವ್‌ ರಾವ್‌ ಪರಿಚಯವಿದ್ದು, ಈತ ಶ್ರೀನಾಥ್‌ನ, ಚಿಂಟ್‌ಫ‌ಂಡ್‌ನ‌ಲ್ಲಿ ಹಣ ಹೂಡಿಕೆ ಮಾಡಿ, 5 ಲಕ್ಷ ರೂ. ಚೀಟಿ ಎತ್ತಿಕೊಂಡಿದ್ದ. ಆದರೆ ನಿಗದಿತ ಸಮಯಕ್ಕೆ ಹಣ ವಾಪಸ್‌ ನೀಡಿರಲಿಲ್ಲ. ಆದರಿಂದ ಆಗಾಗ್ಗೆ ಶ್ರೀನಾಥ್‌, ಮಾಧವ ರಾವ್‌ ಮನೆಗೆ ಬಂದು ಹಣ ವಾಪಸ್‌ ಕೊಡುವಂತೆ ದುಂಬಾಲು ಬಿದ್ದಿದ್ದ. ಆದರೆ ಸಬೂಬುಗಳನ್ನು ಹೇಳಿ ಆರೋಪಿ ದಿನ ಮುಂದೂಡುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

ಆರೋಪಿ ಪತ್ನಿ ಜತೆ ಅಕ್ರಮ ಸಂಬಂಧ: ಹಣಕಾಸಿನ ವಿಚಾರವಾಗಿ ಮಾಧವ ರಾವ್‌ ಮನೆಗೆ ಬರುತ್ತಿದ್ದ ಶ್ರೀನಾಥ್‌, ಆತನ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಮಾಧವ ರಾವ್‌ಗೆ ಗೊತ್ತಾಗಿ, ಮನೆಗೆ ಮತ್ತೂಮ್ಮೆ ಬಾರದಂತೆ ಶ್ರೀನಾಥ್‌ಗೆ ಎಚ್ಚರಿಕೆ ನೀಡಿದ್ದ. ಹೀಗಾಗಿ ಶ್ರೀನಾಥ್‌, ಮಾಧವ ರಾವ್‌ಗೆ ತನ್ನ ಹಣ ವಾಪಸ್‌ ಕೊಡುವಂತೆ ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಹಲವಾರು ಬಾರಿ ಜಗಳ ಉಂಟಾಗಿತ್ತು ಎಂಬುದು ಗೊತ್ತಾಗಿದೆ.

ಈ ಪ್ರಕರಣದ ತನಿಖೆ ವೇಳೆ ಮಾಧವ ರಾವ್‌ ಹೆಸರು ಪತ್ತೆಯಾಗಿತ್ತು. ಬಳಿಕ ಬಾತ್ಮೀದಾರರ ಮಾಹಿತಿ ಆಧರಿಸಿ ವಿಜಿನಾಪುರದ ಆತನ ಮನೆಗೆ ಹೋದಾಗ ಆರೋಪಿ ನಾಪತ್ತೆಯಾಗಿ, ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿದ್ದ. ಬಳಿಕ ಮನೆ ಸಮೀಪದ ಸಿಸಿ ಕ್ಯಾಮರಾ ಹಾಗೂ ಮೊಬೈಲ್‌ ಸಿಡಿಆರ್‌ ಪರಿಶೀಲಿಸಿದಾಗ ಶ್ರೀನಾಥ್‌, ಆರೋಪಿ ಮಾಧವ ರಾವ್‌ ಮನೆಗೆ ಬಂದಿರುವುದು, ಇಬ್ಬರ ಲೋಕೇಷನ್‌ ಒಂದೆಡೆ ಇರುವುದು ಪತ್ತೆಯಾಗಿತ್ತು ಆ ಬಳಿಕ ತಾಂತ್ರಿಕ ತನಿಖೆ ನಡೆಸಿ ಆಂಧ್ರಪ್ರದೇಶದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಕರೆ ತಂದು ವಿಚಾರಣೆ ನಡೆಸಿದಾಗ, ಮೇ 28ರಂದು ಚೀಟಿ ಹಣದ ವಿಚಾರವಾಗಿ ಶ್ರೀನಾಥ್‌ ಬಂದು ವಾಪಸ್‌ ಹೋಗಿದ್ದಾನೆ ಎಂದು ಹೇಳಿದ್ದ. ಹೀಗಾಗಿ ಜೂನ್‌ 4ರಂದು ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ಕಳುಹಿಸಲಾಗಿತ್ತು. ಆದರೆ ಆರೋಪಿ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಂಡು ವಿಚಾರಣೆಗೆ ಗೈರಾಗಿದ್ದ. ಆ ಬಳಿಕ ಅನುಮಾನಗೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಕೆ.ಆರ್‌.ಪುರ ಬಸ್‌ ನಿಲ್ದಾಣದಲ್ಲಿ ವಶಕ್ಕೆ ಪಡೆದು ಠಾಣೆಯಲ್ಲಿ ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು. ‌

ದೇಹದ ಭಾಗಗಳನ್ನು 2 ಬ್ಯಾಗ್‌ಗಳಲ್ಲಿ ತುಂಬಿ ಸಾಗಿಸಿದ!: ಆರೋಪಿ ಮಾಧವ್‌ರಾವ್‌ ತನ್ನ ಸ್ನೇಹಿತ ಶ್ರೀನಾಥ್‌ನನ್ನು ಹತ್ಯೆಗೈಯುವ ಉದ್ದೇಶದಿಂದಲೇ ಕೆಲ ದಿನಗಳ ಹಿಂದೆ ಹೊಸಕೋಟೆಯಲ್ಲಿ ಮಾರಕಾಸ್ತ್ರ ಖರೀದಿಸಿ ಮನೆಗೆ ತಂದಿದ್ದ. ಮೇ 28ರಂದು ಶ್ರೀನಾಥ್‌ ಬರುವುದು ಗೊತ್ತಾಗಿ, ಮಾಧವ್‌ರಾವ್‌ ತನ್ನ ಪತ್ನಿ ಮತ್ತು ಮಕ್ಕಳನ್ನು ಊರಿಗೆ ಕಳುಹಿಸಿದ್ದನು. ಬಳಿಕ ಮನೆಗೆ ಬಂದ ಶ್ರೀನಾಥ್‌ನ ತಲೆಗೆ ಕಬ್ಬಿಣ ರಾಡ್‌ನಿಂದ ಹೊಡೆದು ಕೊಂದಿದ್ದಾನೆ. ಬಳಿಕ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಶೌಚಾಲಯದಲ್ಲಿ ಆತನ ಮೃತದೇಹವನ್ನು ಐದಾರು ತುಂಡುಗಳನ್ನಾಗಿ ಮಾಡಿ, ತಲೆ ಹಾಗೂ ದೇಹದ ಕೆಲ ಭಾಗಗಳನ್ನು ಮಾಧವರಾವ್‌ ಬ್ಯಾಗ್‌ನಲ್ಲಿ ತುಂಬಿದ್ದ. ಬಾಕಿ ತುಂಡುಗಳನ್ನು ಮತ್ತೂಂದು ಬ್ಯಾಗ್‌ಗೆ ತುಂಬಿಕೊಂಡು ರಾಮಮೂರ್ತಿನಗರದ ಬೆಳತ್ತೂರು ಸಮೀಪದಲ್ಲಿದ್ದ ಮೋರಿಯಲ್ಲಿ ದೇಹದ ತುಂಡುಗಳನ್ನು ಎಸೆದಿದ್ದ. ನಂತರ ರಕ್ತದ ಕಲೆ ಆಗಿದ್ದರಿಂದ್ದ ತನ್ನ ಮನೆಯನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸಿ ಬಳಿಕ ತನ್ನ ಮೊಬೈಲ್‌ ಫೋನ್‌ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ವಿಚಾರಣೆ ಸಂದರ್ಭದಲ್ಲಿ ಈ ಕುರಿತು ಆರೋಪಿ ಮಾಧವರಾವ್‌ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು. ‌

ಈ ಸಂಬಂಧ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next