Advertisement

Crime: ತುಂಡರಿಸಿದ ಮೃತ ದೇಹ ಪತ್ತೆಗೆ ಶೋಧ

11:59 AM Jun 10, 2024 | Team Udayavani |

ಬೆಂಗಳೂರು: ಅಕ್ರಮ ಸಂಬಂಧ ಹಾಗೂ ಹಣಕಾಸಿನ ವಿಚಾರಕ್ಕೆ ಹತ್ಯೆಗೀಡಾದ ಚಿಟ್‌ ಫಂಡ್‌ ಕಂಪನಿ ಉದ್ಯೋಗಿ ಶ್ರೀನಾಥ್‌ ದೇಹದ ತುಂಡು ಗಳ ಪತ್ತೆ ಕಾರ್ಯ ಮುಂದುವರಿದಿದ್ದು, ಭಾನುವಾರ ಬೆಳತ್ತೂರು ರಾಜಕಾಲುವೆ ಯಲ್ಲಿ ರಾಮಮೂರ್ತಿನಗರ ಠಾಣೆ ಪೊಲೀಸರು ಹಾಗೂ ಮುಳುಗು ತಜ್ಞರು ಶೋಧ ನಡೆಸಿದರು.

Advertisement

ಹಣಕಾಸು ವಿಚಾರ ಮತ್ತು ಪತ್ನಿಯೊಂದಿಗಿನ ಅಕ್ರಮ ಸಂಬಂಧ ಕಾರಣಕ್ಕೆ ಶ್ರೀನಾಥ್‌ನನ್ನು ಮೇ 28ರಂದು ಕೊಲೆ ಮಾಡಿದ್ದ ಆರೋಪಿ ಮಾಧವರಾವ್‌, ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿದ್ದ. ಬಳಿಕ ಚೀಲಕ್ಕೆ ತುಂಬಿಸಿ ದ್ವಿಚಕ್ರದಲ್ಲಿ ಸಾಗಿಸಿಕೊಂಡು ಹೋಗಿ ಬೆಳತ್ತೂರು ರಾಜಕಾಲುವೆಗೆ ಎಸೆದಿದ್ದ. ಆರೋಪಿ ಮಾಧವರಾವ್‌ ನೀಡಿದ ಮಾಹಿತಿ ಆಧರಿಸಿ ಶ್ರೀನಾಥ್‌ರ ಮೃತ ದೇಹದ ಭಾಗಗಳಿಗಾಗಿ ರಾಜಕಾಲುವೆಯಲ್ಲಿ ಶನಿವಾರ 5 ಕಿ.ಮೀ.ವರೆಗೆ ಶೋಧ ಕಾರ್ಯ ನಡೆಸಲಾಗಿತ್ತು. ಭಾನುವಾರ ಸುಮಾರು 5 ಕಿ.ಮೀ. ಶೋಧ ನಡೆಸಲಾ ಯಿತು. ರಾಜಕಾಲುವೆಯೊಳಗೆ ಬೆಳೆದಿರುವ ಗಿಡಗಳ ಪೊದೆಗಳಲ್ಲೂ ಪರಿಶೀಲನೆ ಮಾಡಲಾಯಿತು. ಆದರೆ, ಎಲ್ಲಿಯೂ ಮೃತ ದೇಹದ ತುಂಡುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿ ಮಾಧವರಾವ್‌, ಶ್ರೀನಾಥ್‌ರ ಮೃತ ದೇಹದ ತುಂಡುಗಳನ್ನು ತುಂಬಿಸಿದ್ದ ಚೀಲವನ್ನು ಕಟ್ಟಿರಲಿಲ್ಲ. ಜತೆಗೆ, ಆ ಸಂದರ್ಭದಲ್ಲಿ ರಾಜಕಾಲುವೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಇರಲಿಲ್ಲ. ಮಾಧವರಾವ್‌, ಮೃತ ದೇಹದ ತುಂಡುಗಳನ್ನು ಎಸೆದ ನಂತರದ ದಿನಗಳಲ್ಲಿ ವ್ಯಾಪಕ ಮಳೆಯಾಗಿ ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿದೆ. ಹೀಗಾಗಿ, ಮೃತ ದೇಹದ ತುಂಡುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಬೆಳತ್ತೂರು ರಾಜಕಾಲುವೆಯ ನೀರು ಪಿನಾಕಿನಿ ನದಿಗೆ ಸೇರುತ್ತದೆ. ಸೋಮವಾರವೂ ಶೋಧ ಕಾರ್ಯ ಮುಂದುವರಿಸುತ್ತೇವೆ. ಮಾಧವರಾವ್‌ನನ್ನು ಕೊಲೆ ಪ್ರಕರಣ ಸಂಬಂಧ ವಿಜಿನಾಪುರದ ಆತನ ಮನೆಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next