ಬೆಂಗಳೂರು: ಹೊಸೂರು ಸರ್ವಿಸ್ ರಸ್ತೆಯ ಬಳಿ ಪದವಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಪ್ರಕರಣದ ತನಿಖೆ ನಡೆಸಿದ್ದ ಎಚ್.ಎಸ್.ಆರ್.ಲೇಔಟ್ ಠಾಣೆ ಪೊಲೀಸರು, 39ನೇ ಎಸಿಜೆಎಂ ನ್ಯಾಯಾಲಯಕ್ಕೆ ಶನಿವಾರ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.
86 ಸಾಕ್ಷಿಗಳ ಹೇಳಿಕೆ, 555 ಪುಟಗಳ ದೋಷಾರೋಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸ ಲಾಗಿದೆ. ಇದೇ ಪ್ರಕರಣದಲ್ಲಿ ಸಿಆರ್‌ಪಿಸಿ 164ರ ಅಡಿ ನಾಲ್ವರ ಹೇಳಿಕೆಯನ್ನು ನ್ಯಾಯಾಧೀಶರ ಎದುರು ದಾಖಲು ಮಾಡಲಾಗಿತ್ತು ಎಂದು ಪೊಲೀಸರು ಹೇಳಿದರು.
ಆಗಸ್ಟ್ 17ರಂದು ರಾತ್ರಿ ಎಸ್.ಆರ್.ನಗರದ ನಿವಾಸಿ ಮುಕೇಶ್ವರನ್(24) ಎಂಬಾತ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಗಸ್ಟ್ 20ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
“ಹೊರವಲಯದಲ್ಲಿ ಇರುವ ಖಾಸಗಿ ಕಾಲೇಜಿನಲ್ಲಿ ಸಂತ್ರಸ್ತ ವಿದ್ಯಾರ್ಥಿನಿ ಓದುತ್ತಿದ್ದರು. ಸ್ನೇಹಿತರ ಜತೆಗೆ ಪಾರ್ಟಿಗೆ ತೆರಳಿದ್ದರು. ತಡರಾತ್ರಿವರೆಗೂ ಕೋರಮಂಗಲ ಪಬ್‌ನಲ್ಲಿ ಸ್ನೇಹಿತರ ಜತೆಗೆ ಪಾರ್ಟಿ ಮಾಡಿದ್ದರು. ಬಳಿಕ ಸ್ನೇಹಿತರೊಂದಿಗೆ ಕಾರು ಚಾಲನೆ ಮಾಡಿಕೊಂಡು ಮನೆಗೆ ಹೋಗುವಾಗ ಮಾರ್ಗ ಮಧ್ಯೆ ಎರಡು ಆಟೊಗಳಿಗೆ ಕಾರು ಡಿಕ್ಕಿಯಾಗಿದೆ.
ಅಲ್ಲಿ ಆಟೊ ಚಾಲಕರು ಹಾಗೂ ಯುವತಿಯ ಸ್ನೇಹಿತರ ಮಧ್ಯೆ ವಾಗ್ವಾದ ನಡೆದಿತ್ತು. ಗಲಾಟೆಯ ಮಾಹಿತಿ ಪೊಲೀಸರಿಗೂ ಗೊತ್ತಾದ್ದರಿಂದ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಬಂದಿದ್ದರು. ಎಲ್ಲರನ್ನೂ ಪೊಲೀಸರು ಸಮಾಧಾನ ಪಡಿಸಿದ್ದರು.
ಬಳಿಕ ಸಂತ್ರಸ್ತ ಯುವತಿ ಕಾರು ಹಾಗೂ ಸ್ನೇಹಿತರನ್ನು ಅಲ್ಲೇ ಬಿಟ್ಟು ಆಟೊದಲ್ಲಿ ತೆರಳಿದ್ದರು. ಸ್ವಲ್ಪ ದೂರ ಪ್ರಯಾಣಿಸಿದ ಮೇಲೆ ಆಟೊ ಇಳಿದು ನಡೆದು ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರನ ಬಳಿ ಡ್ರಾಪ್ ಕೇಳಿ, ಆತನೊಂದಿಗೆ ಹೊರಟಿದ್ದರು. ಆತ ಆಕೆಯನ್ನು ಬೇರೊಂದು ಮಾರ್ಗದಲ್ಲಿ ಬೊಮ್ಮನಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ.