ಬೆಂಗಳೂರು: ದ್ವಿಚಕ್ರ ವಾಹನ ವಿಚಾರವಾಗಿ ತಂದೆ- ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್ ಲೇಔಟ್‌ನ ಮುದ್ದಿನಪಾಳ್ಯ ನಿವಾಸಿ ಅಂಜನ್ ಕುಮಾರ್(27) ಕೊಲೆಯಾದ ಮಗ. ಕೃತ್ಯ ಎಸಗಿದ ಆತನ ತಂದೆ ವೆಂಕಟೇಶ್(57)ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಆರೋಪಿ ವೆಂಕಟೇಶ್, ಪುತ್ರ ಅಂಜನ್‌ಕುಮಾರ್ ಮತ್ತು ಪುತ್ರಿ ಹಾಗೂ ಪತ್ನಿ ಜತೆ ಮುದ್ದಿನಾಪಾಳ್ಯದಲ್ಲಿ ವಾಸವಾಗಿದ್ದರು. ಕೊಲೆಯಾದ ಪುತ್ರ ಅಂಜನ್‌ಕುಮಾರ್ ಪಿಯು ವ್ಯಾಸಂಗ ಅರ್ಧಕ್ಕೆ ಮೊಟಕು ಗೊಳಿಸಿದ್ದು, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಪುತ್ರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಸಂಜೆ ವೆಂಕಟೇಶ್, ಮಗಳ ದ್ವಿಚಕ್ರ ವಾಹನ ತೆಗೆದುಕೊಂಡು ಹೊರಗೆ ಹೋಗಿದ್ದರು. ರಾತ್ರಿ ಮನೆಗೆ ಬಂದಾಗ ದ್ವಿಚಕ್ರ ವಾಹನ ವಾಪಸ್ ತಂದಿರಲಿಲ್ಲ. ಇದೇ ವಿಚಾರಕ್ಕೆ ಸೋಮವಾರ ಬೆಳಗ್ಗೆ ಅಂಜನ್ ಕುಮಾರ್, ತಂದೆ ವೆಂಕಟೇಶನನ್ನು ಪ್ರಶ್ನಿಸಿದ್ದಾನೆ. ಆಗ ವೆಂಕಟೇಶ್ ಎಲ್ಲೋ ನಿಲ್ಲಿಸಿದ್ದೇನೆ. ಈಗ ತರುತ್ತೇನೆ ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಈ ವಿಚಾರಕ್ಕೆ ಅಪ್ಪ-ಮಗನ ನಡುವೆ ವಾಗ್ವಾದ ನಡೆದಿದ್ದು, ವಿಕೋಪಕ್ಕೆ ಹೋದಾಗ ಅಂಜನ್‌ಕುಮಾರ್ ಹೆಲ್ಮೆಟ್‌ನಿಂದ ತಂದೆ ವೆಂಕಟೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ವೆಂಕಟೇಶ್, ಅಡುಗೆ ಮನೆಯಲ್ಲಿದ್ದ ಚಾಕು ತಂದು ಅಂಜನ್‌ಕುಮಾರ್‌ನ ಎದೆಗೆ ಇರಿದಿದ್ದಾನೆ. ಈ ವೇಳೆ ಅಂಜನ್‌ಕುಮಾರ್ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದು, ಕೂಡಲೇ ಆತನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಘಟನೆ ಸಂಬಂಧ ವೆಂಕಟೇಶ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.