ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ತಂದೆ-ತಾಯಿ ನಡುವಿನ ಜಗಳದಲ್ಲಿ ಮಗ ಕೊಲೆಯಾಗಿರುವ ಹೃದಯವಿದ್ರಾವಕ ಘಟನೆ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯ ಜರಗನಹಳ್ಳಿಯಲ್ಲಿ ಬುಧವಾರ ನಡೆದಿದೆ.
ಜರಗನಹಳ್ಳಿ ನಿವಾಸಿ, ಐಟಿ ಕಂಪನಿ ಉದ್ಯೋಗಿ ಯಶ್ವಂತ್(23) ಕೊಲೆಯಾದ ದುರ್ದೈವಿ.
ಘಟನೆ ಸಂಬಂಧ ಯಶ್ವಂತ್‌ನ ತಂದೆ ಬಸವರಾಜು (53) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಬಸವರಾಜು ಲಾರಿ ಚಾಲಕನಾಗಿದ್ದು, ಪತ್ನಿ ಭಾಗ್ಯಲಕ್ಷ್ಮೀ, ಪುತ್ರ ಯಶ್ವಂತ್ ಹಾಗೂ ಪುತ್ರಿ ಜತೆ ಜರಗನಹಳ್ಳಿಯಲ್ಲಿ ವಾಸವಾಗಿದ್ದರು. ಯಶ್ವಂತ್ ಎಂಜಿನಿಯರಿಂಗ್ ಪದವಿ ಪಡೆದು, ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆತನ ಸಹೋದರಿ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗಲು ಯಶ್ವಂತ್ ಸಿದ್ಧವಾಗು ತ್ತಿದ್ದರು. ಅದೇ ವೇಳೆ ತಂದೆ-ತಾಯಿ ನಡುವೆ ಜಗಳ ಆರಂಭಗೊಂಡಿದೆ. ಇದೇ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಯಶ್ವಂತ್, “ನಾನು ಕೆಲಸಕ್ಕೆ ಹೋಗಿ ದುಡಿದು ಮನೆ ನಿರ್ವಹಿಸುತ್ತಿದ್ದೇನೆ. ಆದರೂ ಯಾಕೆ ನೀವಿಬ್ಬರೂ ಜಗಳ ಮಾಡುತ್ತಿದ್ದಿರಿ, ಅದರಿಂದ ನನಗೆ ಸಾಕಷ್ಟು ಕಿರಿಕಿರಿ ಆಗುತ್ತಿದೆ’ ಎಂದು ತಂದೆ-ತಾಯಿಗೆ ಬುದ್ಧವಾದ ಹೇಳಿದ್ದಾರೆ. ಆದರೂ ಪೋಷಕರ ಜಗಳ ಮುಂದುವರಿಸಿದ್ದಾರೆ.
ಚಾಕುವಿನಿಂದ ಪುತ್ರನ ಎದೆಗೆ ಇರಿದ ತಂದೆ: ತಂದೆ-ತಾಯಿ ಮಧ್ಯೆ ಜಗಳ ವಿಕೋಪಕ್ಕೆ ಹೋದಾಗ, ಆರೋಪಿ ಬಸವರಾಜು ಅಡುಗೆ ಮನೆಯಿಂದ ಚಾಕು ತಂದು, ಪತ್ನಿ ಭಾಗ್ಯಲಕ್ಷ್ಮೀಗೆ ಇರಿಯಲು ಮುಂದಾಗಿದ್ದಾನೆ. ಅದನ್ನು ತಡೆಯಲು ಮಧ್ಯ ಪ್ರವೇಶಿಸಿದ ಪುತ್ರ ಯಶ್ವಂತ್‌ನ ಎದೆಗೆ ಆರೋಪಿ ಚಾಕು ಇರಿದಿದ್ದಾನೆ. ಘಟನೆಯಲ್ಲಿ ಯಶ್ವಂತ್‌ಗೆ ತೀವ್ರ ರಕ್ತಸ್ರಾವವಾಗಿದೆ. ಬಳಿಕ ತಂದೆ-ತಾಯಿ ಹಾಗೂ ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮಾರ್ಗ ಮಧ್ಯೆಯೇ ಯಶ್ವಂತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಘಟನೆ ಸಂಬಂಧ ಭಾಗ್ಯಲಕ್ಷ್ಮೀ ದೂರು ನೀಡಿದ್ದು, ಆರೋಪಿ ಬಸವರಾಜುನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪುತ್ರನ ಕಣ್ಣು ದಾನಕ್ಕೆ ಮುಂದಾದ ತಾಯಿ: ಪುತ್ರ ಯಶ್ವಂತ್ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಕಣ್ಣುಗಳನ್ನು ದಾನ ಮಾಡಲು ತಾಯಿ ಭಾಗ್ಯಲಕ್ಷ್ಮೀ ಮುಂದಾಗಿದ್ದಾರೆ. ಬದುಕಿದ್ದಾಗ ಯಶ್ವಂತ್ ತನ್ನ ಕಣ್ಣುಗಳ ದಾನ ಮಾಡುವ ಕುರಿತು ಇಂಗಿತ ವ್ಯಕ್ತಪಡಿಸಿದ್ದ ಎಂದು ಮೂಲಗಳು ತಿಳಿಸಿವೆ.