ಬೆಂಗಳೂರು: ಮದ್ಯದ ಅಮಲಿನಲ್ಲಿ ಪೇಂಟರ್‌ನನ್ನು ಕೊಲೆಗೈದ ಸ್ನೇಹಿತರೇ, ಠಾಣೆಗೆ ಬಂದು ಅಪರಿಚಿತರು ಸ್ನೇಹಿತನ ಕೊಲೆಗೈದಿದ್ದಾರೆ ಎಂದು ದೂರು ನೀಡಿ ಪೊಲೀಸರ ಅತಿಥಿಯಾಗಿರುವ ಘಟನೆ ಗೋವಿಂದಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಗೋರಖ್‌ಪುರ ಮೂಲದ ರಾಜ್‌ಕುಮಾರ್(35) ಕೊಲೆಯಾದವ.
ಸೂರಜ್ ಕುಮಾರ್ ಮತ್ತು ಜೈಸಿಂಗ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ರಾಜ್‌ಕುಮಾರ್ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದ. ಈತನ ಜತೆ ಆರೋಪಿಗಳು ಪೇಟಿಂಗ್ ಕೆಲಸ ಮಾಡುತ್ತಿದ್ದು, ಮೂವರು ನಾಗವಾರ ಬಳಿ ಕೊಠಡಿಯಲ್ಲಿ ಉಳಿದುಕೊಂಡಿದ್ದರು.
ಹೋಳಿ ಹಬ್ಬದ ನಿಮಿತ್ತ ಮಂಗಳವಾರ ಕೆಲಸಕ್ಕೆ ರಜೆ ಇತ್ತು. ಹೀಗಾಗಿ ಮೂವರು ಬಣ್ಣದಾಟ ಆಡಿದ್ದಾರೆ. ಮಧ್ಯಾಹ್ನ ಕೋಣೆಯಲ್ಲಿ ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ರಾಜ್‌ಕುಮಾರ್ ಮತ್ತು ಆರೋಪಿಗಳ ನಡುವೆ ಗಲಾಟೆ ಆರಂಭವಾಗಿದ್ದು, ಅದು ವಿಕೋಪಕ್ಕೆ ಹೋದಾಗ ರಾಜ್‌ಕುಮಾರ್ ತಲೆಗೆ ಆರೋಪಿಗಳು ದೊಣ್ಣೆಯಿಂದ ಹೊಡೆದು, ಬಳಿಕ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದರು.
ಕೋಣೆ ಮಾಲೀಕ ಹಾಗೂ ಸ್ಥಳೀಯರಿಂದ ಕೆಲ ಮಾಹಿತಿ ಸಂಗ್ರಹಿಸಿದ್ದರು. ಆಗ ಹೊರಗಡೆಯಿಂದ ಯಾರು ಬಂದಿಲ್ಲ ಎಂಬುದು ಗೊತ್ತಾಗಿದೆ. ಜತೆಗೆ ಸ್ಥಳದಲ್ಲಿ ದೊರೆತ ಸಾûಾÂಗಳು ಹಾಗೂ ಬೆರಳಚ್ಚು ಮುದ್ರೆಗಳು ದೂರು ನೀಡಿದ ವ್ಯಕ್ತಿಗಳದ್ದೇ ಇರಬಹುದೆಂದು ಶಂಕಿಸಿ ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕೆಲಸ ಹಾಗೂ ಸಂಬಳ ವಿಚಾರದಲ್ಲಿ ಗಲಾಟೆ ನಡೆದಿದ್ದು. ಅದು ವಿಕೋಪಕ್ಕೆ ಹೋದಾಗ ಕೃತ್ಯ ಎಸಗಿದ್ದೇವೆ ಎಂದಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳಿಂದಲೇ ಪೊಲೀಸರಿಗೆ ದೂರು
ಕೃತ್ಯ ಎಸಗಿದ ಬಳಿಕ ಆರೋಪಿಗಳು ಮೃತದೇಹದ ಜತೆಯೇ ಸುಮಾರು 2-3 ಗಂಟೆಗಳ ಕಾಲ ಇದ್ದರು. ನಂತರ ಹೊರಗಡೆ ಹೋಗಿ, ರಾತ್ರಿ ಮನೆಗೆ ವಾಪಸ್ ಬಂದಿದ್ದು, ಮೃತದೇಹ ಸಾಗಾಟಕ್ಕೆ ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ನಂತರ ಮತ್ತೂಮ್ಮೆ ಕೋಣೆಯ ಬಾಗಿಲು ಹಾಕಿಕೊಂಡು ತಡರಾತ್ರಿ ಮನೆಗೆ ಬಂದಿದ್ದಾರೆ. ಕೆಲ ಹೊತ್ತು ಮನೆಯಲ್ಲೇ ಇದ್ದು, ಬಳಿಕ ಠಾಣೆಗೆ ಹೋಗಿದ್ದ ಸೂರಜ್ ಕುಮಾರ್, “ನನ್ನ ಸ್ನೇಹಿತನ ಕೊಲೆಯಾಗಿದೆ. ಮಧ್ಯಾಹ್ನದವರೆಗೆ ಜತೆಯಲ್ಲಿದ್ದು, ಸಂಜೆ ಬಳಿಕ ಹೊರಗಡೆ ಹೋಗಿದ್ದೆವು. ಆ ನಂತರ ಮನೆಗೆ ಬಂದಾಗ ಯಾರೋ ಅಪರಿಚಿತರು ಆತನನ್ನು ಕೊಲೆಗೈದು ಪರಾರಿಯಾಗಿದ್ದಾರೆ’ ಎಂದು ದೂರು ನೀಡಿದ್ದ, ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.