ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಉತ್ತರ ವಿಭಾಗದ ಪೊಲೀಸರು ಮಂಗಳ ವಾರ ತಡರಾತ್ರಿ 290 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.
ಉತ್ತರ ವಿಭಾಗದ ಮಲ್ಲೇಶ್ವರ, ಶ್ರೀರಾಮಪುರ, ರಾಜಾಜಿನಗರ, ಸುಬ್ರಹ್ಮಣ್ಯನಗರ, ಮಹಾಲಕ್ಷ್ಮೀ ಲೇಔಟ್, ರಾಜಗೋಪಾಲನಗರ, ನಂದಿನಿ ಲೇಔಟ್, ಆರ್.ಎಂ.ಸಿ ಯಾರ್ಡ್, ಯಶವಂತಪುರ, ಪೀಣ್ಯ, ಸೋಲದೇವನಹಳ್ಳಿ, ಗಂಗಮ್ಮನಗುಡಿ, ಜಾಲಹಳ್ಳಿ, ಬಾಗಲಗುಂಟೆ, ಜೆ.ಸಿ.ನಗರ, ಸಂಜಯನಗರ, ಹೆಬ್ಟಾಳ ಹಾಗೂ ಆರ್.ಟಿ. ನಗರ ಠಾಣೆ ವ್ಯಾಪ್ತಿಗಳಲ್ಲಿರುವ 290 ರೌಡಿಶೀಟರ್‌ಗಳ ಮನೆಗಳನ್ನು ತಪಾಸಣೆಗೊಳಪಡಿಸಲಾಯಿತು.
ಲೋಕಸಭಾ ಚುನಾವಣೆ ವೇಳೆ ಕೆಲ ರಾಜಕೀಯ ವ್ಯಕ್ತಿಗಳ ಜತೆ ಸೇರಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಲು ಹಾಗೂ ಮತದಾರರನ್ನು ಬೆದರಿಸಲು ಸಿದ್ದತೆ ನಡೆಸಿದ್ದಾರೆ ಎಂಬ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಇನ್‌ಸ್ಪೆಕ್ಟರ್, ಪಿಎಸ್‌ಐಗಳ 50 ಪ್ರತ್ಯೇಕ ತಂಡಗಳನ್ನು ರಚಿಸಿ ದಾಳಿ ಮಂಗಳವಾರ ತಡರಾತ್ರಿ 1 ಗಂಟೆಯಿಂದ ಬುಧವಾರ ಮುಂಜಾನೆ 6 ಗಂಟೆವರೆಗೆ ಶೋಧ ಕಾರ್ಯ ನಡೆಸಲಾಗಿದೆ.
ಕೆಲವರ ಮನೆಗಳಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಎಲ್ಲಾ ರೌಡಿಗಳಿಗೆ ಚುನಾವಣೆ ವೇಳೆ ಕಾನೂನು ಬಾಹಿರ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.