ಬೆಂಗಳೂರು: ಪ್ರತ್ಯೇಕ 2 ಸರಗಳ್ಳತನ ಪ್ರಕರಣದಲ್ಲಿ ಇಬ್ಬರು ಆಟೋ ಚಾಲಕರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ನಡೆಸುತ್ತಿದ್ದರು. ಕೋಡಿಗೆಹಳ್ಳಿ ದೇಬಸಿನ್ (35) ಮತ್ತು ಮಧುಸೂದನ್(20) ಎಂಬುವರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದರೆ, ಆಟೋ ಚಾಲಕರಾದ ಶರತ್ (29) ಮತ್ತು ಶರವಣ(21) ಎಂಬುವರು ಯಲಹಂಕ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಚೇರಿ ಬಳಿ ಮಹಿಳೆಯೊಬ್ಬರು ಬೆಳಗ್ಗೆ ಹಾಲು ತೆಗೆದುಕೊಂಡು ಮನೆ ಗೇಟ್ ಬಳಿ ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಸರಗಳ್ಳರು ಮಹಿಳೆ ಧರಿಸಿದ್ದ 60 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಕೊಡಿಗೇಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ದೇಬಸಿನ್ ಮತ್ತು ಮಧುಸೂದನ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.
ಹೊಟೇಲ್ ನಡೆಸುತ್ತಿದ್ದ ಮಧುಸೂದನ್ಗೆ ದೇಬಸಿನ್ ಸಹಾಯಕನಾಗಿದ್ದ. ಆರೋಪಿಗಳಿಂದ 60 ಗ್ರಾಂ ಮಾಂಗಲ್ಯಸರ, ಬೈಕ್ ವಶಕ್ಕೆ ಪಡೆದಿದ್ದಾರೆ. ಮತೊಂದು ಪ್ರಕರಣದಲ್ಲಿ ಆಟೋ ಚಾಲಕರಾದ ಶರತ್ ಹಾಗೂ ಶರವಣ ಎಂಬುವರನ್ನು ಬಂಧಿಸಲಾಗಿದೆ.
ಶಿವನಹಳ್ಳಿಯ ಅಪಾರ್ಟ್ಮೆಂಟ್ ನ ಮಹಿಳೆಯೊಬ್ಬರು ಜಕ್ಕೂರು ಮುಖ್ಯ ರಸ್ತೆಯಲ್ಲಿ ವಾಯು ವಿಹಾರ ಮಾಡುತ್ತಿದ್ದಾಗ ಇಬ್ಬರು ಆರೋಪಿಗಳು ಬೈಕ್ನಲ್ಲಿ ಬಂದು 21 ಗ್ರಾಂ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದರು.