Advertisement
ಬೆಂಗಳೂರಿನ ಗೋಲ್ಡ್‌ಫಿಂಚ್ ಹೊಟೇಲ್‌ನಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಅವರು, ನ.25ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಯಾಗಲಿದ್ದು, ನ.26ರಂದು ಸಂಜೆ 7 ಗಂಟೆಗೆ ಸಮಾರೋಪ ನಡೆಯಲಿದೆ. ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಕೋಣಗಳನ್ನು ಓಡಿಸುವ ಕರೆಗೆ “ರಾಜ-ಮಹಾರಾಜ”, ಮುಖ್ಯ ವೇದಿಕೆಗೆ “ಪುನೀತ್ ರಾಜ್‌ಕುಮಾರ್” ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗೆ “ಕೃಷ್ಣರಾಜ ಒಡೆಯರ್” ಹೆಸರಿಡಲಾಗಿದೆ.
Related Articles
ಶಾಸಕ ಕೆ.ಎಸ್.ಅಶೋಕ್ ಕುಮಾರ್ ರೈ ಮಾತನಾಡಿ, ಸುಮಾರು 228 ಜತೆ ಕೋಣಗಳನ್ನು ನೋಂದಣಿ ಮಾಡಿಸಿಕೊಳ್ಳಲಾಗಿದ್ದು, ಈ ಪೈಕಿ ಆಯ್ದ 200 ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಲಿವೆ. ಕರಾವಳಿಯ ಕಂಬಳಗಳಲ್ಲಿ ಗರಿಷ್ಠ 140ರಿಂದ 160 ಜತೆ ಕೋಣಗಳ ಪಾಲ್ಗೊಳ್ಳುವಿಕೆ ಈವರೆಗಿನ ದಾಖಲೆಯಾಗಿದೆ. ಅದನ್ನು ಮೀರಿ ಅಲ್ಲಿ ದಾಖಲೆ ಬರೆಯಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಂಬಳಕ್ಕೆ ಹೋಲಿಸಿದರೆ ಅರಮನೆ ಮೈದಾನದಲ್ಲಿ ನಿರ್ಮಿಸಿರುವ ಕೆರೆ (ಟ್ರ್ಯಾಕ್)ಉತ್ತಮವಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಮಾಣ ಪತ್ರವೂ ಸಿಕ್ಕಿದೆ. ಸಾಮಾನ್ಯವಾಗಿ ಕಂಬಳಗಳ ಕರೆ 147 ಮೀಟರ್ ಇದ್ದರೆ, ಇಲ್ಲಿನದು 155 ಮೀಟರ್ ಉದ್ದವಿದೆ. ಸುಮಾರು 24 ಎಕ್ರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 8 ಸಾವಿರ ವಾಹನಗಳನ್ನು ನಿಲ್ಲಿಸಬಹುದು ಎಂದು ತಿಳಿಸಿದರು.
Advertisement
7 ಸಾವಿರ ಮಂದಿ ಕುಳಿತುಕೊಳ್ಳ ಬಹುದಾದ ಗ್ಯಾಲರಿ ನಿರ್ಮಿಸಲಾಗಿದೆ. 50 ಗಂಟೆಯಲ್ಲಿ ವಿವಿಧ ವೇದಿಕೆಗಳಲ್ಲಿ ಸುಮಾರು 8-10 ಲಕ್ಷ ಮಂದಿ ಕಂಬಳವನ್ನು ವೀಕ್ಷಿಸುವ ನಿರೀಕ್ಷೆ ಇದೆ ಎಂದು ವಿವರಿಸಿದರು.
ಯಡಿಯೂರಪ್ಪ ಉದ್ಘಾಟನೆನ.25ರಂದು ಬೆಳಗ್ಗೆ 10.30ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಂಬಳವನ್ನು ಉದ್ಘಾಟಿಸಲಿದ್ದಾರೆ. ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಕರೆಯನ್ನು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಂಸ್ಕೃತಿಕ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅದೇ ದಿನ ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ| ಜಿ. ಪರಮೇಶ್ವರ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ರಾಮಲಿಂಗಾ ರೆಡ್ಡಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಖ್ಯಾತ ಚಲನಚಿತ್ರ ಕಲಾವಿದರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸ ಲಿದ್ದಾರೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ಗುರು ಕಿರಣ್, ಕಂಬಳ ಸಮಿತಿಯ ಉಪೇಂದ್ರ ಶೆಟ್ಟಿ, ಉಮೇಶ್ ಶೆಟ್ಟಿ, ಮಂಜುನಾಥ್ ಕನ್ಯಾಡಿ, ತುಳು ಕೂಟದ ಅಧ್ಯಕ್ಷ ರಾಜೇಂದ್ರ ಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು. ಪ್ರಥಮ ಬಹುಮಾನ 16 ಗ್ರಾಂ ಚಿನ್ನ
ಪ್ರಥಮ ಬಹುಮಾನವಾಗಿ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂ., ದ್ವಿತೀಯ ಬಹುಮಾನವಾಗಿ 8 ಗ್ರಾಂ ಚಿನ್ನ, 50 ರೂ. ಹಾಗೂ ಮೂರನೇ ಬಹುಮಾನವಾಗಿ 4 ಗ್ರಾಂ ಚಿನ್ನ ಹಾಗೂ 25 ಸಾವಿರ ರೂ. ನೀಡಲಾಗುವುದು.
8 ಕೋಟಿ ರೂ. ಖರ್ಚು
ಕಂಬಳಕ್ಕೆ 8 ಕೋಟಿ ರೂ. ಖರ್ಚು ಮಾಡಲಾಗಿದೆ. ಸರಕಾರ 1 ಕೋಟಿ ರೂ. ಅನುದಾನ ನೀಡಿದೆ. ಪ್ರತಿ ಕೋಣಗಳ ಮಾಲಕರಿಗೆ 50 ಸಾವಿರ ರೂ. ಅನ್ನು ಲಾರಿ ಬಾಡಿಗೆ ರೂಪದಲ್ಲಿ ನೀಡುತ್ತೇವೆ. ಹಲವಾರು ಸಂಘ ಸಂಸ್ಥೆಗಳು ಕಂಬಳಕ್ಕೆ ಅನುದಾನ ನೀಡಿವೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಇಂದು ಹೊರಡಲಿವೆ ಕೋಣಗಳು
ನ.23ರಂದು ಬೆಳಗ್ಗೆ ಸುಮಾರು 178 ಜೋಡಿ ಕಂಬಳದ ಕೋಣಗಳು ಉಪ್ಪಿನಂಗಡಿಯಿಂದ ಹೊರಟು ಸಂಜೆ 4 ಗಂಟೆಗೆ ಹಾಸನಕ್ಕೆ ತಲುಪಲಿದೆ. ಹಾಸನದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರ ಸಹಕಾರದಿಂದ ಕೋಣಗಳಿಗೆ ಆಹಾರದ ವ್ಯವಸ್ಥೆ, ಸುಮಾರು 2 ಸಾವಿರ ಜನಕ್ಕೆ ಊಟ-ತಿಂಡಿಯ ವ್ಯವಸ್ಥೆ ಮಾಡಲಿದ್ದಾರೆ. ಬಳಿಕ ಮೆರವಣಿಗೆ ಮೂಲಕ ಕೋಣಗಳನ್ನು ಅರಮನೆ ಮೈದಾನಕ್ಕೆ ತರಲಾಗುವುದು. ಸುಮಾರು 15 ಜತೆ ಕೋಣಗಳ ಮಾಲಕರು ಬೆಂಗಳೂರು ಕಂಬಳಕ್ಕಾಗಿಯೇ ಕೋಣಗಳನ್ನು ಖರೀದಿಸಿದ್ದಾರೆ. 6 ಜತೆ ಕೋಣಗಳ ಮಾಲಕರು ಮುಸ್ಲಿಮರು ಹಾಗೂ ಕ್ರೈಸ್ತ ಮಾಲಕತ್ವದ ನಾಲ್ಕು ಜತೆ ಕೋಣಗಳಿವೆ ಎಂದು ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.