ಬೆಂಗಳೂರು: ನಗರದ ವೈಯಾಲಿಕಾವಲ್ ನ ಮನೆಯೊಂದರಲ್ಲಿ ಮಹಿಳೆಯೊಬ್ಬಳ ಭೀಕರ ಹತ್ಯೆ ನಡೆದಿದ್ದು, ಫ್ರಿಡ್ಜ್ ನಲ್ಲಿ ಆಕೆಯ ಮೃತದೇಹದ 30 ಕ್ಕೂ ಹೆಚ್ಚು ತುಂಡುಗಳು ಶನಿವಾರ(ಸೆ21) ಪತ್ತೆಯಾಗಿವೆ.
ವಸತಿ ಕಟ್ಟಡ ಮೊದಲ ಮಹಡಿಯಿಂದ ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಅವರು ಪ್ರಾಥಮಿಕ ತನಿಖೆಯ ಬಳಿಕ ಮಾಧ್ಯಮಗಳಿಗೆ ಕೆಲ ಮಾಹಿತಿಗಳನ್ನು ನೀಡಿದ್ದು ”29 ವರ್ಷದ ಮಹಿಳೆಯ ಮೃತ್ತ ದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿದ್ದು, 30 ಕ್ಕೂ ಹೆಚ್ಚು ತುಂಡುಗಳನ್ನು ಮಾಡಲಾಗಿದೆ. ನಾಲ್ಕೈದು ದಿನದ ಹಿಂದೆ ಕೃತ್ಯ ನಡೆಸಲಾಗಿದೆ.ಸ್ಥಳಕ್ಕೆ SOCO(Scene of Crime Officer), ಶ್ವಾನದಳ,ಎಫ್ ಎಸ್ ಎಲ್ ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ತನಿಖೆ ಮುಂದುವರಿದಂತೆ ನೀಡುತ್ತೇವೆ” ಎಂದು ಹೇಳಿದ್ದಾರೆ.
ಹತ್ಯೆಗೀಡಾದ ಮಹಿಳೆ ಮಹಾಲಕ್ಷ್ಮೀ ಎಂದು ತಿಳಿದು ಬಂದಿದೆ. ವಿವಾಹಿತೆಯಾಗಿದ್ದು ಒಂದು ಮಗುವೂ ಇದ್ದು ಪತಿಯಿಂದ ದೂರವಾಗಿದ್ದರು ಎಂದು ಹೇಳಲಾಗುತ್ತಿದೆ. ನಗರದ ಮಾಲ್ ಒಂದರಲ್ಲಿ ಕೆಲಸ ಮಾಡಿಕೊಂಡು ಒಂಟಿಯಾಗಿ ವಾಸ ಮಾಡುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ಪತಿಯೂ ಸ್ಥಳಕ್ಕೆ ಆಗಮಿಸಿರುವುದಾಗಿ ವರದಿಯಾಗಿದೆ.
”ಮಹಾಲಕ್ಷ್ಮೀ ಹೊರ ರಾಜ್ಯದ ಮೂಲದವಳಾಗಿದ್ದು, ಇಲ್ಲೇ ನೆಲೆಯಾಗಿದ್ದರು” ಎಂದು ಪೊಲೀಸ್ ಆಯುಕ್ತ ಸತೀಶ್ ತಿಳಿಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.