Advertisement

ಬೆಂಕಿ ಅವಘಡದಲ್ಲಿ ಐವರ ಸಜೀವ ದಹನ

06:10 AM Jan 09, 2018 | |

ಬೆಂಗಳೂರು:ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಸೋಮವಾರ ನಸುಕಿನಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಐವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

Advertisement

ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ಸಮೀಪದ ಕುಂಬಾರ ಸಂಘದ ಕಟ್ಟಡದಲ್ಲಿ ದುರಂತ ಸಂಭವಿಸಿದ್ದು, ಭಾನುವಾರ ರಾತ್ರಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ವ್ಯಾಪಾರ ಮುಗಿದ ನಂತರ ಐವರು ಕಾರ್ಮಿಕರು ಅಲ್ಲೇ ಮಲಗಿದ್ದು ಸೋಮವಾರ ನಸುಕಿನಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆಯಿಂದ  ಹೊರ ಬರಲಾಗದೆ  ಉಸಿರುಗಟ್ಟಿ ಸಜೀವ ದಹನವಾಗಿದ್ದಾರೆ.


ಸ್ವಾಮಿ (23), ಪ್ರಸಾದ್‌(26), ಕೀರ್ತಿ (24) ಮಂಜುನಾಥ್‌ (45) ಹಾಗೂ ಮಹೇಶ್‌ (35) ಮೃತ ದುರ್ದೈವಿಗಳು. ಇವರೆಲ್ಲರೂ ತುಮಕೂರು, ಮಂಡ್ಯ, ಹಾಸನದಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಕುಂಬಾರ ಸಂಘದ ಕಟ್ಟಡದಲ್ಲಿರುವ ಕೈಲಾಶ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು.


ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮಾಲೀಕ ದಯಾಶಂಕರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು. ಆತನ ಸಹೋದರ ಪ್ರಕಾಶ್‌ ಹಾಗೂ ಮ್ಯಾನೇಜರ್‌ ಸೋಮಶೇಖರ್‌ ಎಂಬುವರನ್ನು ಬಂಧಿಸಲಾಗಿದೆ.

ಏನಾಯ್ತು ?
ಭಾನುವಾರ ತಡರಾತ್ರಿ 1 ಗಂಟೆ ಸುಮಾರಿಗೆ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ವ್ಯಾಪಾರ ಮುಗಿದ ಬಳಿಕ ಮ್ಯಾನೇಜರ್‌ ರಾಮಚಂದ್ರ ಎಂಬುವರು ಮನೆಗೆ  ತೆರಳಿದ್ದರು. ಐವರು ಕಾರ್ಮಿಕರು ಊಟ ಮುಗಿಸಿ ಮಳಿಗೆಯ ಶೆಟರ್‌ ಎಳೆದುಕೊಂಡು ಬೀಗ ಹಾಕಿಕೊಂಡು ಮೊದಲ ಮಹಡಿಯಲ್ಲಿ ಮಲಗಿದ್ದರು ನಸುಕಿನಲ್ಲಿ ನೆಲಮಳಿಗೆಯಲ್ಲಿರುವ ಬಾರ್‌ನಲ್ಲಿ ಶಾರ್ಟ್‌ಸರ್ಕಿಟ್‌ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. 


ನೆಲಮಾಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿ ಅಲ್ಲೇ ಇದ್ದ ಪೇಪರ್‌ ಮತ್ತು ಮದ್ಯದ ಬಾಟಲಿ ಹಾಗೂ ಪೌಚ್‌ಗಳಿಗೆ ಬೆಂಕಿಯ ಕಿಡಿ ತಗುಲಿ ಸ್ಫೋಟಗೊಂಡಿವೆ. ಕ್ಷಣದಲ್ಲೇ ಇಡೀ ಕಟ್ಟಡದಲ್ಲಿ ದಟ್ಟವಾದ ಹೊಗೆ ಆವರಿಸಿದೆ.

ಮೊದಲ ಮಹಡಿಯಲ್ಲಿದ್ದ ಐವರು ಎಚ್ಚರಗೊಂಡು ಹೊರಗೆ ಬರಲು ಪ್ರಯತ್ನಿಸಿದರಾದರೂ ಸಾಧ್ಯವಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮಂಜುನಾಥ್‌, ಮಹೇಶ್‌ ಹಾಗೂ ಕೀರ್ತಿ ಶೌಚಾಲಯ ಬಳಿ ಸಾವನ್ನಪ್ಪಿದ್ದು, ಸ್ವಾಮಿ ಮತ್ತು ಪ್ರಸಾದ್‌ ಮೊದಲ ಮಹಡಿಯ ನಡುಕೋಣೆಯಲ್ಲಿ ಮೃತಪಟ್ಟಿದ್ದಾರೆ. ನಾಲ್ವರಿಗೆ ಬೆಂಕಿಯಿಂದ ಮುಖ ಸೇರಿ ದೇಹದ ಇತರೆ ಭಾಗಗಳಲ್ಲಿ ತೀವ್ರ ಸುಟ್ಟಗಾಯಗಳಾಗಿವೆ.

ನಸುಕಿನಲ್ಲಿ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡು ರಸ್ತೆಯಲ್ಲಿ ಹೋಗುತ್ತಿದ್ದ ಸೆಲ್ವಕುಮಾರ್‌ ಎಂಬುವರು ಬಾರ್‌ನಲ್ಲಿ ದಟ್ಟವಾದ ಹೊಗೆ ಕಂಡು ಬಾರ್‌ನ ಮ್ಯಾನೇಜರ್‌ ರಾಮಚಂದ್ರಗೆ ಕರೆ ವಿಷಯ ತಿಳಿಸಿದ್ದಾರೆ. ನಂತರ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Advertisement

ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು  ಹೊರ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರು. ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ರಾತ್ರಿ ವೇಳೆಗೆ ಪೋಷಕರಿಗೆ ಹಸ್ತಾಂತರಿಸಲಾಯಿತು.
ಗೃಹ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌, ಶಾಸಕರಾದ ಆರ್‌.ವಿ.ದೇವರಾಜ್‌, ಜಮೀರ್‌ ಅಹಮದ್‌, ಮೇಯರ್‌ ಸಂಪತ್‌ರಾಜ್‌, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಪೊಲೀಸ್‌ ಮಹಾನಿರ್ದೇಶಕ ಎಂ.ಎನ್‌.ರೆಡ್ಡಿ, ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌, ಡಿಸಿಪಿ ಅನುಚೇತ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಘಟನೆ ಸಂಬಂಧ ಕಲಾಸಿಪಾಳ್ಯ ಪೊಲೀಸರು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮಾಲೀಕ ದಯಾಶಂಕರ್‌(ಎ1), ಪ್ರಕಾಶ್‌(ಎ2), ಸೋಮಶೇಖರ್‌(ಎ3) ಹಾಗೂ ಕುಂಬಾರ ಸಂಘ ಕಟ್ಟಡದ ಮಾಲೀಕ(ಎ4)ನ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ.

ರಾಜಾಜಿನಗರದ ನಿವಾಸಿ ವಿ.ಆರ್‌.ದಯಾಶಂಕರ್‌ ಕಲಾಸಿಪಾಳ್ಯದಲ್ಲಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ನಡೆಸುತ್ತಿದ್ದು ಕೆಲ ವರ್ಷಗಳ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದರಿಂದ ಸಹೋದರ ಪ್ರಕಾಶ್‌ ಹಾಗೂ ತಮ್ಮ ಸಂಬಂಧಿ ಸೋಮಶೇಖರ್‌ಗೆ ಉಸ್ತುವಾರಿ ವಹಿಸಿದ್ದ. ಸೋಮಶೇಖರ್‌ ಅವರು ರಾಮಚಂದ್ರ ಎಂಬುವರನ್ನು ಕೆಲಸಕ್ಕಿಟ್ಟುಕೊಂಡು ನಡೆಸುತ್ತಿದ್ದರು.

ಹೊರಬರಲಾಗಲಿಲ್ಲ
*ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ಇಡೀ ಕಟ್ಟಡದಲ್ಲಿ ದಟ್ಟವಾದ ಹೊಗೆ ಆವರಿಸಿದಾಗ ಮೊದಲ ಮಹಡಿಯಲ್ಲಿ ಮಲಗಿದ್ದ ಐವರು ಎಚ್ಚರಗೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಕೆಳಗೆ ಇಳಿಯುವ ಕಬ್ಬಿಣದ ಮೆಟ್ಟಿಲುಗಳು ಕೂಡ ಕಾದಿತ್ತು. ಹೀಗಾಗಿ ನೆಲಮಾಳಿಗೆಗೆ ಬರಲು ಸಾಧ್ಯವಾಗಿಲ್ಲ. ನಂತರ ಶೌಚಾಲಯದಲ್ಲಿ ಅವಿತುಕೊಳ್ಳಲು ಮುಂದಾಗಿದ್ದಾರೆ. ಈ ಮಧ್ಯೆ ಸ್ವಾಮಿ ಹಾಗೂ ಪ್ರಸಾದ್‌ ನೆಲಮಾಳಿಗೆಗೆ ಬಂದು ಶೆಟರ್‌ ಎತ್ತಲು ಯತ್ನಿಸಿದ್ದು ಸಾಧ್ಯವಾಗಿಲ್ಲ. ಆಗ ಜೋರಾಗಿ ರಕ್ಷಿಸುವಂತೆ ಕೂಗಿಕೊಂಡಿದ್ದಾರೆ. ಮತ್ತೆ ಮೊದಲ ಮಹಡಿಯ ಶೌಚಾಲಯಕ್ಕೆ ಹೋಗಿದ್ದಾರೆ. ಅಷ್ಟರಲ್ಲಿ ಮಾಹಿತಿ ತಿಳಿದು ಮ್ಯಾನೇಜರ್‌ ರಾಮಚಂದ್ರ ಸ್ಥಳಕ್ಕೆ ಬಂದು ಸ್ವಾಮಿ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಸ್ವಾಮಿ ಹೊರ ಬರಲು ಸಾಧ್ಯವಾಗುತ್ತಿಲ್ಲ. ಬಾಗಿಲು ತೆರೆಸಿ ಎಂದು ಹೇಳಿದ. ಒಳಗಿನವರ ಚೀರಾಟ ಕೇಳಿ ಆತಂಕಗೊಂಡ ರಾಮಚಂದ್ರ ಸ್ಥಳೀಯರ ನೆರವಿನೊಂದಿಗೆ ಎಷ್ಟೇ ಪ್ರಯತ್ನಿಸಿದರೂ ಬೆಂಕಿಯಿಂದ ಕಬ್ಬಿಣದ ರೋಲಿಂಗ್‌ ಶೆಟರ್‌ ಕಾದಿದ್ದ ಕಾರಣ ಬೀಗ ತೆಗೆಯಲು ಸಾಧ್ಯವಾಗಿಲ್ಲ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ನೀರು ಹಾಕಿ, ಸಲಕರಣೆಗಳ ಮೂಲಕ ಶೆಟರ್‌ ಒಡೆದು ಒಳ ಹೋದರೂ ಅಷ್ಟರಲ್ಲಿ ಐವರು ಮೃತಪಟ್ಟಿದ್ದು.

ಒಂದೇ ಬಾಗಿಲು, ಕಿಟಕಿಯೂ ಇಲ್ಲ!
*ಕಟ್ಟಡದಲ್ಲಿ ಮೂರು ಮಹಡಿ ಇದ್ದು ನೆಲಮಹಡಿಯಲ್ಲಿ  ಕೈಲಾಸ ಬಾರ್‌ ಇದೆ. ನೆಲ ಹಾಗೂ ಮಹಡಿಯಿಂದ ಹೊರ ಹೋಗಲು  ಇರುವುದು ಒಂದೇ ಬಾಗಿಲು. ಅದು ನೆಲಮಹಡಿಯಲ್ಲಿ ಮಾತ್ರ. ಒಂದು ವೇಳೆ ಮೊದಲ ಮಹಡಿಯಲ್ಲಿ ಒಂದು ಬಾಗಿಲು ಅಥವಾ ಸಣ್ಣ ಕಿಟಕಿ ಇದಿದ್ದರೂ ಐವರು ಬದುಕುವ ಸಾಧ್ಯತೆಗಳಿದ್ದವು. ನೆಲ ಮಳಿಗೆಯಲ್ಲಿ ಪ್ರವೇಶ ದ್ವಾರವಿದ್ದರೆ, ಮೊದಲ ಮಳಿಗೆಯಲ್ಲಿ ಸಣ್ಣದಾದ ಗವಾಕ್ಷಿಗಳಿವೆ. ಬೇರೆ ಎಲ್ಲಿಯೂ ಉಸಿರಾಡಲು ಜಾಗವೇ ಇಲ್ಲ. ಹೀಗಾಗಿ ಐವರು ಬಾರ್‌ನಿಂದ ಹೊರ ಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ.

“ಇಲಿ’ಯಿಂದ ಬಲಿ?
ಕೈಲಾಸ ಬಾರ್‌ನಲ್ಲಿ ವಿಪರೀತ ಇಲಿ ಹಾಗೂ ತಿಗಣೆಗಳ ಕಾಟ.ಬಾರ್‌ನ ಕ್ಯಾಶ್‌ ಪಕ್ಕದಲ್ಲೇ ವಿದ್ಯುತ್‌ನ ಮಖ್ಯಸ್ವಿಚ್‌ ಇತ್ತು. ಬಾರ್‌ ಮುಚ್ಚಿದ ಬಳಿಕ ಇಲಿಗಳು ಈ  ಸ್ವಿಚ್‌ನ ವೈರ್‌ಗಳನ್ನು ಕತ್ತಿರಿಸುತ್ತಿದ್ದವು. ಹೀಗೆ ಎರಡು ಬಾರಿ ವಿದ್ಯುತ್‌ ವೈರ್‌ಗಳನ್ನು ಕತ್ತರಿಸಿದ್ದು, ಎರಡು ಬಾರಿಯೂ ದುರಸ್ಥಿಗೊಳಿಸಿದ್ದರು. ಭಾನುವಾರ ರಾತ್ರಿ ಕೂಡ ಇಲಿಗಳು ವೈರ್‌ಗಳನ್ನು ಕತ್ತಿರಿಸಿರುವ ಸಾಧ್ಯತೆಯಿದೆ.ಹೀಗಾಗಿ ಶಾರ್ಟ್‌ಸರ್ಕ್ನೂಟ್‌ ಸಂಭವಿಸಿ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ತಮ್ಮದಲ್ಲದ ತಪ್ಪಿಗೆ ಪ್ರಾಣ ತೆತ್ತರು
*ಭಾನುವಾರ ಎಚ್‌ಎಸ್‌ಆರ್‌ ಬಡಾವಣೆಯ ಖಾಸಗಿ ಅಪಾರ್ಟ್‌ಮೆಂಟ್‌ನ ಎಸ್‌ಟಿಪಿ ಶುಚಿಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಪ್ರಕರಣದ ಬೆನ್ನಲ್ಲೇ ಸೋಮವಾರ ನಸುಕಿನಲ್ಲಿ ಕಲಾಸಿಪಾಳ್ಯದಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಸಂಭವಿಸಿ ಐವರು ಕಾರ್ಮಿಕರು ಸಜೀವದಹನಗೊಂಡಿದ್ದಾರೆ. ಎರಡೂ ಪ್ರಕರಣಗಳಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಕಾರ್ಮಿಕರು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇತ್ತೀಚೆಗೆ ವರ್ತೂರು ಬಳಿ ಕಟ್ಟಡ ನಿರ್ಮಾಣದಲ್ಲಿ ಕಾರ್ಯದಲ್ಲಿ ತೊಡಗಿದ್ದ 19 ಕಾರ್ಮಿಕರು ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದ ಘಟನೆಯೂ ನಡೆದು ಆ ಪೈಕಿ ಒಬ್ಬರು ಪ್ರಾಣ ಕಳೆದುಕೊಂಡರು. ನಗರದಲ್ಲಿ ಸಂಭವಿಸುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಕಾರ್ಮಿಕರಿಗೆ ಭದ್ರತೆ, ಸುರಕ್ಷತೆ, ಸೂಕ್ತ ಸೌಲಭ್ಯ ಇಲ್ಲದೆ ಪ್ರಾಣಾಪಾಯಗಳು ಸಂಭವಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next