Advertisement

Bengaluru: ಬೈಕಿಂದ ಬಿದ್ರೂ ನೆರವು ನೀಡದ ಸ್ನೇಹಿತನಿಗೆ ಇರಿತ

01:25 PM Aug 03, 2024 | Team Udayavani |

ಬೆಂಗಳೂರು: ಕಳವು ಮಾಡಿದ ಬೈಕ್‌ನಲ್ಲಿ ಹೋಗುವಾಗ ಆಯತಪ್ಪಿ ಬಿದ್ದರೂ ನೆರವಿಗೆ ಬಾರಲಿಲ್ಲ. ಬೈಕ್‌ ಚಾಲನೆಗೂ ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನಿಗೆ ಚಾಕುವಿನಿಂದ ಇರಿದಿದ್ದ ಆರೋಪಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಸಾರಾಯಿಪಾಳ್ಯ ನಿವಾಸಿ ಸಾದಿಕ್‌ ಅಲಿಯಾಸ್‌ ಡ್ಯಾನಿ(24) ಬಂಧಿತ ಆರೋಪಿ. ಶಿವಾಜಿನಗರದ ಸೈಯದ್‌ ನಾಜೀಂ(23) ಎಂಬಾತ ಚಾಕು ಇರಿತಕ್ಕೊಳಗಾಗಿದ್ದು, ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜು.21ರಂದು ಈ ಘಟನೆ ನಡೆದಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿ ಸಾದಿಕ್‌ನನ್ನು ಬಂಧಿಸಲಾಗಿದೆ.

ಏನಿದು ಘಟನೆ?: ಆರೋಪಿ ಸಾದಿಕ್‌ ಮತ್ತು ನಾಜೀಂ ಕೆಲ ವರ್ಷಗಳಿಂದ ಸ್ನೇಹಿತರಾಗಿದ್ದು, ಅಪರಾಧ ಹಿನ್ನೆಲೆವುಳ್ಳವರಾಗಿದ್ದಾರೆ. ಜುಲೈ 21ರಂದು ಗೋರಿಪಾಳ್ಯದಲ್ಲಿ ಇಬ್ಬರು ಸೇರಿ ದ್ವಿಚಕ್ರ ವಾಹನ ಕಳವು ಮಾಡಿದ್ದಾರೆ. ಬಳಿಕ ಕದ್ದ ಬೈಕ್‌ನಲ್ಲೇ ನಂದಿನಿ ಲೇಔಟ್‌ ಕಡೆಗೆ ಹೊರಟ್ಟಿದ್ದು. ಮಾರ್ಗ ಮಧ್ಯೆ ಮತ್ತೂಂದು ಬೈಕ್‌ ಕದ್ದು ತಲಾ ಒಂದು ಬೈಕ್‌ನಲ್ಲಿ ದಾಸರಹಳ್ಳಿ ಕಡೆಗೆ ಬಂದಿದ್ದಾರೆ. ಅದಕ್ಕೂ ಮೊದಲು ನಾಜೀಂ ಚಲಾಯಿಸುತ್ತಿದ್ದ ಬೈಕ್‌ ಚಾಲನೆಗೆ ಸಾದಿಕ್‌ ಕೇಳಿದ್ದ. ಆದರೆ, ನಾಜೀಂ ಕೊಟ್ಟಿರಲಿಲ್ಲ.

ಈ ಮಧ್ಯೆ ಮಾರ್ಗ ಮಧ್ಯೆ ಆರೋಪಿ ಸಾದಿಕ್‌ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದಿಂದ ರಸ್ತೆಗೆ ಬಿದ್ದಿದ್ದಾನೆ. ಅಷ್ಟರಲ್ಲಿ ನಾಜೀಂ ಮತ್ತೂಂದು ದ್ವಿಚಕ್ರ ವಾಹ ನದಲ್ಲಿ ಮುಂದಕ್ಕೆ ಹೋಗಿದ್ದ. ಎಷ್ಟು ಹೊತ್ತಾದರೂ ಸಾದಿಕ್‌ ಬಾರದ ಹಿನ್ನೆಲೆಯಲ್ಲಿ ಕೆಲ ಹೊತ್ತಿನ ಬಳಿಕ ನಾಜೀಂ ಹಿಂದಕ್ಕೆ ಬಂದಿದ್ದಾನೆ. ಈ ವೇಳೆ ಕೋಪಗೊಂಡಿದ್ದ ಸಾದಿಕ್‌, ನಾನು ಬಿದ್ದರೂ ನೆರವಿಗೆ ಬಾರಲಿಲ್ಲ ಎಂದು ಗಲಾಟೆ ಮಾಡಿ ನಾಜೀಂಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಈ ನಡುವೆ ಸಾದಿಕ್‌ ಕದ್ದ ದ್ವಿಚಕ್ರ ವಾಹನದಲ್ಲಿ ಮಾಗಡಿಗೆ ಹೋಗುತ್ತಿದ್ದ. ಆಗ ಸ್ಥಳೀಯರ ಜತೆಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾನೆ. ಈ ವೇಳೆ ಮಾಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ಸಾದಿಕ್‌ ಬಳಿ ಚಾಕು ಇರುವುದನ್ನು ಕಂಡು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಇತ್ತ ಶಿವಾಜಿನಗರ ಠಾಣೆ ಪೊಲೀಸರು, ಸಾದಿಕ್‌ ಬಂಧನದ ಸುದ್ದಿ ತಿಳಿದು, ಬಾಡಿ ವಾರೆಂಟ್‌ ಮೇಲೆ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಹಲ್ಲೆ ಬಳಿಕ ಜೊತೆಗೇ ಆಸ್ಪತ್ರೆಗೆ ತೆರಳಿದ್ದ ಗೆಳೆಯರು

ಚಾಕು ಇರಿತದಿಂದ ನಾಜೀಂಗೆ ರಕ್ತಸ್ರಾವವಾದ್ದರಿಂದ ಸಾರಾಯಿಪಾಳ್ಯದ ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಇಬ್ಬರು ಜತೆಯಲ್ಲೇ ತೆರಳಿ ದ್ವಿಚಕ್ರವಾಹನದಿಂದ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆ ನೀಡುವಂತೆ ಕೇಳಿದ್ದಾರೆ. ಬಳಿಕ ಅಲ್ಲಿ ಬ್ಯಾಂಡೇಜ್‌ ಮಾಡಿಸಿಕೊಂಡು ನಾಜೀಂ ಮನೆ ಕಡೆಗೆ ತೆರಳಿದ್ದಾನೆ. ಸಾದಿಕ್‌ ಸಹ ಹೊರಟು ಹೋಗಿದ್ದಾನೆ. ಮರು ದಿನ ನಾಜೀಂ ಗಾಯಗೊಂಡಿರುವುದನ್ನು ಕಂಡು ಆತನ ಸಹೋದರ ಪ್ರಶ್ನಿಸಿ, ಬೌರಿಂಗ್‌ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ವಿಷಯ ತಿಳಿದು ಶಿವಾಜಿನಗರ ಠಾಣೆ ಪೊಲೀಸರು ಆಸ್ಪತ್ರೆಗೆ ತೆರಳಿ ನಾಜೀಂನಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next