Advertisement

Bengaluru Bandh: ಇಂದು ಮಧ್ಯರಾತ್ರಿಯಿಂದಲೇ ಬಂದ್‌

01:32 PM Sep 10, 2023 | Team Udayavani |

ಬೆಂಗಳೂರು: ಸರ್ಕಾರದ ಶಕ್ತಿ ಯೋಜನೆಯಿಂದಾಗಿ ನಷ್ಟಕ್ಕೆ ಸಿಲುಕಿರುವ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ಚಾಲಕರಿಗೆ ಮಾಸಿಕ 10 ಸಾವಿರ ರೂ. ಪರಿಹಾರ ಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆ.11ರಂದು “ಬೆಂಗಳೂರು ಬಂದ್‌’ಗೆ ಕರೆ ನೀಡಿದ್ದು ಭಾನುವಾರ ಮಧ್ಯ ರಾತ್ರಿಯಿಂದಲೇ ಖಾಸಗಿ ವಾಹನಗಳ ಸೇವೆ ಸ್ಥಗಿತವಾಗುವ ಹಿನ್ನೆಲೆಯಲ್ಲಿ ದೂರದ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.

Advertisement

ಜತೆಗೆ ಸೋಮವಾರ ರಾಜಧಾನಿ ವ್ಯಾಪ್ತಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳ ಖಾಸಗಿ ವಾಹನ ಸೌಲಭ್ಯ ಕೂಡ ಬಂದ್‌ ಆಗುವ ಸಾಧ್ಯತೆ ದಟ್ಟವಾಗಿದ್ದು, ಶಾಲಾ ಮಕ್ಕಳಿಗೂ ಬಿಸಿ ತಟ್ಟುವ ನಿರೀಕ್ಷೆಯಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್‌.ನಟರಾಜ್‌ ಶರ್ಮ, ಈಗಾಗಲೇ 36 ಸಂಘಟನೆಗಳ ಮುಖಂಡರು ಬಂದ್‌ಗೆ ಬೆಂಬಲ ನೀಡಿದ್ದು, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೇವೆ ನೀಡುವ ಖಾಸಗಿ ವಾಹನಗಳು ಸೇರಿವೆ. ಈಗಾಗಲೇ ಸಂಬಂಧಪಟ್ಟ ಶಾಲಾ-ಕಾಲೇಜು ಆಡಳಿತ ಮಂಡಳಿಗೆ ಖಾಸಗಿ ಸಾರಿಗೆ ಸಂಸ್ಥೆಯ ಮಾಲೀಕರು ಮಾಹಿತಿ ನೀಡಿದ್ದಾರೆ ಎಂದು ಹೇಳಿ ದ್ದಾರೆ. ಜತೆಗೆ ಒಕ್ಕೂಟ ಕೂಡ ಖಾಸಗಿ ಸಾರಿಗೆ ಸಂಸ್ಥೆಗಳ ಬಂದ್‌ ಹಿನ್ನೆಲೆಯಲ್ಲಿ ಒಂದು ದಿನ ಮಕ್ಕಳ ರಜೆ ನೀಡುಂತೆ ರಾಜಧಾನಿ ವ್ಯಾಪ್ತಿಯ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗೆ ಮನವಿ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ. ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್‌ ಹಿನ್ನೆಲೆ ನಗರದಲ್ಲಿ 3 ಲಕ್ಷ ಆಟೋ, 1.5ಲಕ್ಷ ಟ್ಯಾಕ್ಸಿ, 20 ಸಾವಿರ ಗೂಡ್ಸ್‌ ವಾಹನಗಳು, 5 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80 ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೋರೆಟ್‌ ಕಂಪನಿ ಬಸ್‌ಗಳು ಬಂದ್‌ ಆಗಲಿದ್ದು ಸಿಲಿಕಾನ್‌ ಸಿಟಿ ಜನರಿಗೆ ಬಂದ್‌ ಬಿಸಿ ತಟ್ಟಲಿದೆ.

ಇವು ಇರುವುದಿಲ್ಲ :

 ಆಟೋಗಳು

Advertisement

 ಓಲಾ ಉಬರ್‌ ಆಟೋ, ಕ್ಯಾಬ್‌ಗಳು

 ಶಾಲಾ ಆಟೋಗಳು

 ಕಂಪನಿ ಕ್ಯಾಬ್‌ಗಳು

 ಏರ್ಪೋರ್ಟ್‌ ಕ್ಯಾಬ್‌ಗಳು

 ಸ್ಕೂಲ್‌ ಬಸ್‌ಗಳು

 ಖಾಸಗಿ ಬಸ್‌ಗಳು ಯಾವ ವಾಹನ ಇರುತ್ತೆ?

 ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌

 ಬೈಕ್‌ ಟ್ಯಾಕ್ಸಿ

 ಮೆಟ್ರೋ ರೈಲು

 ಸ್ವಂತ ವಾಹನಗಳ ಸಂಚಾರ

ಸರ್ಕಾರಿ ಸಾರಿಗೆಯಲ್ಲಿ ಪ್ರಯಾಣಿಸಿ: ಖಾಸಗಿ ಸಾರಿಗೆ ಸಂಘನೆಗಳ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಆಟೋ ರಿಕ್ಷಾಗಳು, ಓಲಾ, ಉಬರ್‌ ಆಟೋಗಳು, ಶಾಲಾ ಆಟೋಗಳು, ಕಂಪನಿಗಳ ಕ್ಯಾಬ್‌, ಏರ್ಪೋರ್ಟ್‌ ಕ್ಯಾಬ್‌ ಗಳು ರಸ್ತೆಗಿಳಿಯುವುದು ಬಹುತೇಕ ಅನುಮಾನ. ಸ್ಕೂಲ್‌ ವ್ಯಾನ್‌ಗಳು, ಸ್ಕೂಲ್‌ ಬಸ್‌ಗಳು, ಖಾಸಗಿ ಬಸ್‌ಗಳು ಕೂಡ ಬಂದ್‌ ಗೆ ಬೆಂಬಲ ಸೂಚಿಸಿದ್ದು, ಈ ಎಲ್ಲಾ ವಾಹನಗಳ ಸಂಚಾರ ಬಂದ್‌ ಆಗಲಿದೆ. ಬಂದ್‌ನಿಂದ ಸರ್ಕಾರಿ ಸಾರಿಗೆ ಬಿಟ್ಟು ಖಾಸಗಿ ಸಾರಿಗೆ ಬಳಕೆ ಮಾಡುವವರಿಗೆ ಹೆಚ್ಚು ಸಮಸ್ಯೆ ಆಗುವ ಸಾಧ್ಯತೆ ಇದೆ. ಏರ್‌ಪೋರ್ಟ್‌ ಟ್ಯಾಕ್ಸಿ ಸಂಪೂರ್ಣ ಸ್ಥಗಿತ ಹಿನ್ನೆಲೆ ವಿಮಾನ ಪ್ರಯಾಣಿರಿಗೆ ತೊಂದರೆ ಆಗಲಿದೆ.

ಶಾಲಾ ಬಸ್‌ಗಳ ಸಂಘಟನೆಯು ಬಂದ್‌ಗೆ ಬೆಂಬಲ ನೀಡಿರುವುದರಿಂದ ಬೆಂಗಳೂರು ನಗರದ ಹೃದಯ ಭಾಗ ಮತ್ತು ಹೊರ ವಲಯದ ಶಾಲೆಗಳಲ್ಲಿ ಓದುತ್ತಿರುವ ಸ್ಕೂಲ್‌ ಬಸ್‌ ಅವಲಂಬಿಸಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಶಾಲೆಗಳು ಸ್ವಯಂ ಪ್ರೇರಿತವಾಗಿ ಶಾಲೆಗಳಿಗೆ ರಜೆ ಘೋಷಿಸಿವೆ. ಆದರೆ, ಒಕ್ಕೂಟದಿಂದ ರಜೆಯ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ●ಶಶಿಕುಮಾರ್‌, ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ.

ನಮಗೆ ಸರ್ಕಾರದಿಂದ ಈವರೆಗೆ ಯಾವುದೇ ಸೂಚನೆ ಬಂದಿಲ್ಲ. ಆದ್ದರಿಂದ ಸೋಮವಾರ ನಿಗದಿಯಾಗಿರುವ ಪದವಿ ಪರೀಕ್ಷೆಗಳು ಎಂದಿನಂತೆ ಸಾಗಲಿದೆ. ನಮ್ಮ ವಿದ್ಯಾರ್ಥಿಗಳು ಬಿಎಂಟಿಸಿ ಬಸ್‌ಅನ್ನು ಹೆಚ್ಚು ಅವಲಂಬಿಸಿದ್ದಾರೆ. ಹಾಗೆಯೇ ಬಿಎಂಟಿಸಿ ಬಸ್‌ ಸೇವೆ ಎಂದಿನಂತೆ ಇರಲಿದೆ. ●ಡಾ.ಶ್ರೀನಿವಾಸ್‌, ಕುಲಸಚಿವ (ಮೌಲ್ಯಮಾಪನ), ಬೆಂಗಳೂರು ವಿವಿ.

Advertisement

Udayavani is now on Telegram. Click here to join our channel and stay updated with the latest news.

Next