ಬೆಂಗಳೂರು: ಕರ್ನಾಟಕದಲ್ಲಿ ಬರ ಪರಿಸ್ಥಿತಿಯಿದ್ದರೂ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಇಂದು (ಸೆ.26) ಬೆಂಗಳೂರು ಬಂದ್ ಗೆ ಕರೆ ನೀಡಿದೆ. ಬೆಳಗ್ಗೆ 6 ಗಂಟೆಗೆ ಆರಂಭವಾದ ಬೆಂಗಳೂರು ಬಂದ್ ಸಂಜೆ 6 ಗಂಟೆಯವರೆಗೆ ಮುಂದುವರಿಯಲಿದೆ. ಈ ಬಂದ್ ಗೆ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ನೀಡಿರುವುದು ಕಾವು ಹೆಚ್ಚಿಸಿದೆ.
ಬಂದ್ ಗೆ ಅವಕಾಶವಿಲ್ಲ ಎಂದು ಪೊಲೀಸರು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಬಲವಂತದ ಬಂದ್ ಮತ್ತು ರ್ಯಾಲಿಗಳನ್ನು ನಡೆಸುವಂತಿಲ್ಲ ಎಂದಿದ್ದಾರೆ. ಬಲವಂತವಾಗಿ ಅಂಗಡಿ ಬಾಗಿಲುಗಳನ್ನು ಮುಚ್ಚಿಸುವುದು ಅಥವಾ ವಾಹನಗಳನ್ನು ತಡೆದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಸೋಮವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಎಂಟಿಸಿ, ಕೆಎಸ್ಆರ್ ಟಿಸಿ ಬಸ್ ಗಳ ಓಡಾಟ ಎಂದಿನಂತಿದ್ದರೂ ಜನರು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ರಸ್ತೆಗಿಳಿದಿಲ್ಲ. ಹೋಟೆಲ್ ಗಳು ತೆರೆದಿದ್ದರೂ ಗ್ರಾಹಕ ಸಂಖ್ಯೆ ಕಡಿಮೆ ಕಂಡುಬಂತು.
ಮೆಟ್ರೋ ಬೆಂಬಲ: ಬೆಂಗಳೂರು ಬಂದ್ ಗೆ ಬಿಎಂಆರ್ಸಿಎಲ್ ನೈತಿಕ ಬೆಂಬಲ ಸೂಚಿಸಿದೆ. ಬಂದ್ ನಡುವೆಯೂ ಬೆಳ್ಗೆಯಿಂದಲೇ ನಮ್ಮ ಮೇಟ್ರೋ ಓಡಾಟ ಆರಂಭವಾಗಿದೆ.
ಬಂದ್ ನಡುವೆಯೇ ಎಂದಿನಂತೆ ಬಿಎಂಟಿಸಿ ಮತ್ತು ಕೆಎಸ್ ಆರ್ಟಿಸಿ ಸಂಚಾರ ನಡೆಸಿವೆ. ಕೆಎಸ್ ಆರ್ಟಿಸಿ ಬಸ್ಗಳು ರಾಜ್ಯದ ವಿವಿಧ ಪ್ರದೇಶಗಳಿಗೆ ಸಂಚಾರ ನಡೆಸುತ್ತಿವೆ.
ಬಂದ್ ಗೆ ಪೆಟ್ರೋಲ್ ಬಂಕ್ ಒಕ್ಕೂಟ ನೈತಿಕ ಬೆಂಬಲ ಸೂಚಿಸಿದೆ. ಆದರೂ ಕೂಡ ಪೆಟ್ರೋಲ್ ಬಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಚಿತ್ರಂಗದ ಬೆಂಬಲ: ಬೆಂಗಳೂರು ಬಂದ್ ಗೆ ಕನ್ನಡ ಚಿತ್ರೋದ್ಯಮ ಸಂಪೂರ್ಣ ಬೆಂಬಲ ಸೂಚಿಸಿದೆ. ಸಿನಿಮಾ ಶೂಟಿಂಗ್ ಬಂದ್ ಆಗಿದ್ದು, ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಸ್ಥಗಿತ ಮಾಡಲಾಗಿದೆ. ಟೆಲಿವಿಷನ್ ಅಸೋಸಿಯೇಷನ್ ಕೂಡ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಸೀರಿಯಲ್ ಹಾಗೂ ರಿಯಾಲಿಟಿ ಶೋ ಚಿತ್ರೀಕರಣಗಳು ನಡೆಯುತ್ತಿಲ್ಲ.
ಹಲವರ ಬಂಧನ: ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಕುರುಬೂರು ಶಾಂತಕುಮಾರ್ ಅವರನ್ನು ವಶಕ್ಕೆ ಪಡೆದರು.
ಈ ವೇಳೆ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ ಕುರುಬೂರು ಶಾಂತಕುಮಾರ್, ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಕರ್ನಾಟಕ ಸರ್ಕಾರ ನೀರಗಂಟಿ ಸರ್ಕಾರ. ನಮ್ಮ ಸರ್ಕಾರ ತಮಿಳುನಾಡಿಗೆ ನೀರು ಹರಿಸಿ ನೀರುಗಂಟಿ ಕೆಲಸ ಮಾಡುತ್ತಿದೆ. ಬಂದ್ ದಿಕ್ಕು ತಪ್ಪಿಸುವ ಕೆಲಸವಾಗಬಾರದು. ಜಲ್ಲಿಕಟ್ಟು ಆದಾಗ ತಮಿಳುನಾಡು ಪೊಲೀಸರು ಸಹಕಾರ ನೀಡಿದರು. ಇಲ್ಲಿ ಪೊಲೀಸರು ಪ್ರತಿಭಟನೆ ಮಾಡುವವರಿಗೆ ಕೆಲವೊಂದು ಸಮಸ್ಯೆ ಆಗುತ್ತಿದೆ ಎಂದು ಗೊತ್ತಾಗಿದೆ. ಸದ್ಯದವರೆಗೂ ಬಂದ್ ಯಶಸ್ವಿಯಾಗಿದೆ. ಎಲ್ಲರೂ ಬೆಂಬಲ ನೀಡಿದ್ದಾರೆ. 144 ಸೆಕ್ಷನ್ ಹಾಕಬಾರದಿತ್ತು. ನಮ್ಮ ಹೋರಾಟ, ಚಳುವಳಿ ಇರಲಿದೆ. ಇಲ್ಲಿ ಏನೇ ನಡೆದರೂ ಇಡೀ ರಾಜ್ಯಕ್ಕೆ ಸಂದೇಶ ಹೋಗುತ್ತದೆ. ಪೊಲೀಸರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಕರವೇ ಬೆಂಬಲವಿಲ್ಲ: ಇಂದು ಕರೆ ನೀಡಿರುವ ಬೆಂಗಳೂರು ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಬೆಂಬಲ ನೀಡಿಲ್ಲ. ಪ್ರವೀಣ್ ಶೆಟ್ಟಿ ಬಣವು ಶುಕ್ರವಾರದ ಕರ್ನಾಟಕ ಬಂದ್ ಗೆ ಬೆಂಬಲ ನೀಡಿದರೆ, ನಾರಯಣ ಗೌಡ ಅವರು ಯಾವುದೇ ಬಂದ್ ಗೆ ಬೆಂಬಲವಿಲ್ಲ ಎಂದಿದ್ದಾರೆ.
ನಾನು ಯಾವುದೇ ಬಂದ್ಗೆ ಬೆಂಬಲ ಕೊಡಲ್ಲ. ಕನ್ನಡ ಭಾಷೆ, ನೆಲ, ಜಲದ ವಿಚಾರವಾಗಿ ನನ್ನ ಹೋರಾಟ ಮುಂದುವರಿಯುತ್ತೆ. ಬಂದ್ ನಿಂದ ಜನ ಸಾಮಾನ್ಯರಿಗೆ, ದಿನಗೂಲಿ ನೌಕಕರಿಗೆ ತೊಂದರೆಯಾಗುತ್ತದೆ. ಬಂದ್ ನಿಂದ ಕಾವೇರಿಯನ್ನ ಉಳಿಸಿಕೊಳ್ಳಲು ಆಗಲ್ಲ. ಬಂದ್ ಅಂದರೆ ಟೌನ್ ಹಾಲ್ ನಿಂದ ಮೆರವಣಿಗೆ ಬರುವುದು ಅಷ್ಟೇನಾ? ಮಾತಿಗೆ ಮುಂಚೆ ಬಂದ್ ಒಂದೇ ಬ್ರಹ್ಮಾಸ್ತ್ರ ಆಗಬಾರದು. ರಾಜಕಾರಣಿಗಳನ್ನು ನಂಬಿಕೊಂಡು ಹೋರಾಟಕ್ಕೆ ಹೋಗಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದರು.
ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಇಂದಿನ ಬೆಂಗಳೂರು ಬಂದ್ ಗೆ ನಮ್ಮ ಬೆಂಬಲ ಇಲ್ಲ. ಆದರೆ ನಮ್ಮ ಹೋರಾಟ ನಿರಂತರವಾಗಿರುತ್ತೆ. ಕನ್ನಡ ಭಾಷೆ, ನೆಲ, ಜಲ ಅಂತ ಬಂದಾಗ ನಮ್ಮ ಹೋರಾಟ ಮುಂಚೂಣಿಯಲ್ಲಿರುತ್ತೆ. ಇಂದು ನಾವು ರಾಜಭವನಕ್ಕೆ ತೆರಳಿ ಮುತ್ತಿಗೆ ಹಾಕಲಿದ್ದೇವೆ. ವಾಟಳ್ ನಾಗರಾಜ್ ಅವರ ಜೊತೆಗೂಡಿ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ. ಇದು ರಾಜಕೀಯ ಪಕ್ಷಗಳು ಸೇರಿಕೊಂಡು ಮಾಡುತ್ತಿರುವ ಬಂದ್. ಇದೇ ತಿಂಗಳ 29ರಂದು ಕರ್ನಾಟಕ ಬಂದ್ ಮಾಡಲಿದ್ದೇವೆ. ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನ ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.