Advertisement

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

03:45 PM Oct 05, 2024 | Team Udayavani |

ಬೆಂಗಳೂರು: ನಾಡಿನ ಪ್ರಖ್ಯಾತ ಹಬ್ಬಗಳಲ್ಲಿ ಒಂದಾದ ದಸರಾ ಬಂತೆಂದರೆ, ಸಾಂಸ್ಕೃತಿಕ ನಗರಿ ಮೈಸೂರಿನಂತೆ ಉದ್ಯಾನ ನಗರಿ ಬೆಂಗಳೂರಿನ ಮನೆ-ಮನೆಗಳಲ್ಲಿ ಹಲವು ಅವತಾರ, ರೂಪಗಳುಳ್ಳ ವಿಭಿನ್ನ ಮಾದರಿ ವಿಷಯಗಳನ್ನು ಒಳಗೊಂಡ ಬೊಂಬೆಗಳನ್ನು ಪ್ರದರ್ಶನ ಮಾಡಲಾಗಿದೆ.

Advertisement

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಸಂಭ್ರಮ ಆರಂಭವಾಗುತ್ತಿದ್ದಂತೆ ಇತ್ತ ರಾಜ್ಯದೆಲ್ಲೆಡೆ ದಸರಾ ಕಳೆಗಟ್ಟುತ್ತದೆ. ಅದೇ ರೀತಿ, ಬೆಂಗಳೂರಿನ ತ್ಯಾಗರಾಜ ನಗರ 3ನೇ ಬ್ಲಾಕ್‌ ನಿವಾಸಿ ರಿಗ್ರೆಟ್‌ ಅಯ್ಯರ್‌ ಅವರ ಮನೆಯಲ್ಲಿ ಸುಮಾರು 11 ತಲೆಮಾರಿನಿಂದ ಪಟ್ಟದ ಗೊಂಬೆಗಳ ಪಾರಂಪರಿಕವನ್ನು ಕಾಪಾಡಿಕೊಂಡು ಬಂದಿದ್ದು, ಅವರ ಪತ್ನಿ ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌ ಅವರು ಕಳೆದ 37 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ. ಒಟ್ಟಾರೆ 364ನೇ ಪರಂಪರೆ ಉತ್ಸವ ಇದಾಗಿದೆ. ಈ ಬಾರಿ ಅವರ ಮನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ ಸುದ್ದಿಯಾಗಿರುವ “ಅಯೋಧ್ಯೆ ಶ್ರೀರಾಮ ಮಂದಿರ; ಶ್ರೀರಾಮಲಲ್ಲಾ ವಿಗ್ರಹ’ ಮಾದರಿಯ ಗೊಂಬೆಗಳು ಹಾಗೂ ಅಲ್ಲಿ ಬಳಸಿದ ವಸ್ತುಗಳ ಸಂಗ್ರಹ ಆಕರ್ಷಕವಾಗಿವೆ.

ಭಾರತೀಯರ 500 ವರ್ಷಗಳ ಕನಸು ನನಸಾಗಿರುವ ಅಯೋಧ್ಯೆ ಶ್ರೀರಾಮ ಮಂದಿರದ ಪ್ರತಿಕೃತಿಯನ್ನು ಇಡಲಾಗಿದ್ದು, ಇದನ್ನು ಮಣ್ಣಿನಲ್ಲಿ ತಯಾರಿಸಲಾಗಿದೆ. ಜತೆಗೆ 9 ಇಂಚಿನ ಶ್ರೀರಾಮನ ಕಂಚಿನ ಉತ್ಸವ ಮೂರ್ತಿ, ರಾಮಮಂದಿರದ ನಿರ್ಮಾಣದ ಕಾಲದಲ್ಲಿ 30 ಅಡಿ ಆಳದಲ್ಲಿ ಬಳಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗುವಲಕಾನಹಳ್ಳಿಯಿಂದ ಕಳುಹಿಸಿಕೊಟ್ಟ 17 ಸಾವಿರ ಕಲ್ಲಿನ ಮಾದರಿಯನ್ನು ಇಲ್ಲಿ ಕಾಣಬಹುದು. ಇಷ್ಟೇ ಅಲ್ಲದೇ, ರಾಮ ಮಂದಿರ ಪ್ರಾರಂಭ ಕಾರ್ಯಕ್ರಮದ ಆಮಂತ್ರಣ, ಅಲ್ಲಿಯ ಹರಿಯುವ ನದಿಯ ತೀರ್ಥ, ಟ್ರೈಬಲ್‌ ರಾಮ, ರಾಮ ಮಂದಿರ ನಿರ್ಮಾಣದ ವೇಳೆ ಸುಮಾರು 30 ಅಡಿ ಆಳದಲ್ಲಿ ದೊರೆತ ಮಣ್ಣು, ಅಕ್ಷತೆಯನ್ನು ಒಳಗೊಂಡಂತೆ ರಾಮಮಂದಿರ, ಮುಂಭಾಗದ ಮೆಟ್ಟಿಲು ಪ್ರತಿಕೃತಿಯನ್ನು ಪ್ರದರ್ಶಿಸಲಾಗಿದೆ ಎಂದು ರಿಗ್ರೇಟ್‌ ಅಯ್ಯರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಇಷ್ಟೇ ಅಲ್ಲದೇ, ಇವರ ಮನೆಯಲ್ಲಿ 40 ಜೊತೆ (ಒಟ್ಟು 80) ಪಟ್ಟದ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದರಲ್ಲಿ ದಸರಾ ಹಬ್ಬದ ವಿಶೇಷವಾಗಿರುವ ಅಂಬಾರಿ, ಆಟಿಕೆಗಳು, ಮರದ ಆಟಿಕೆಗಳು, ಬಿದಿರು ಹಾಗೂ ಮಣ್ಣಿನಿಂದ ಮಾಡಿರುವ ಗೊಂಬೆಗಳು, ಹಿತ್ತಾಳೆ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ದಸರಾ ಹಬ್ಬದ ಪ್ರಯುಕ್ತ ನವದಿನಗಳ ಕಾಲ ಲಕ್ಷ್ಮಿ, ಸರಸ್ವತಿ, ಪಾರ್ತಿಗೆ ಕಳಸ ಪೂಜೆ, ಸಪ್ತ ಮಾತೃಕೆಯರು, ಅಷ್ಟ ಲಕ್ಷ್ಮಿಯರು, ನವ ದುರ್ಗೆಯರಿಗೆ ಪಾಡ್ಯದ ದಿನದಿಂದ ದಶಮಿವರೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ಎಂದು ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌ ತಿಳಿಸುತ್ತಾರೆ.

Advertisement

ದಸರಾ ಹಬ್ಬ ಸಮೀಪಿಸುತ್ತಿದ್ದಂತೆ ಸುಮಾರು 8 ದಿನಗಳ ಮೊದಲೇ ಈ ವರ್ಷದ ವಿಶೇಷದ ಬಗ್ಗೆ ಆಲೋಚಿಸಿ, ಅದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಸಿದ್ಧತೆ ಮಾಡಿಕೊಳ್ಳುತ್ತೇವೆ. ಈ ಬಾರಿ ಪಟ್ಟದ ಗೊಂಬೆಗಳಲ್ಲಿಯೇ ಮರದಿಂದ ತಯಾರಿಸಿದ ರಾಮಲಲ್ಲಾ ವಿಶೇಷವಾಗಿದೆ. ಪಾಡ್ಯದಿಂದ (ಅ.3) ದಶಮಿ (ಅ.12) ವರೆಗೆ ಪ್ರದರ್ಶನಕ್ಕೆ ಇಡಲಾಗಿದ್ದು, ನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ●ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌, ತ್ಯಾಗರಾಜ ನಗರ ನಿವಾಸಿ

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next