Advertisement

Bengaluru: ಕೃಷಿ ಮೇಳದಲ್ಲಿ ಪರ್ಯಾಯ ತಳಿಯ ಕಾರುಬಾರು

04:40 PM Nov 13, 2023 | Team Udayavani |

ಬೆಂಗಳೂರು: ಈ ಬಾರಿ ಕೃಷಿ ಮೇಳದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುವ ವಿದೇಶಿ ಬಾಟೆಲ್‌ ಬದನೆ, ಚೆರ್ರಿ ಟೊಮ್ಯಾಟೋ, ಅಲಂಕಾರಿಕ ಸೂರ್ಯಕಾಂತಿ ತಳಿಯನ್ನು ರೈತರಿಗೆ ಪರಿಚಯಿಸಲು ಜಿಕೆವಿಕೆ ಮುಂದಾಗಿದೆ.

Advertisement

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ರಾಜ್ಯದಲ್ಲಿ ವಾಡಿಕೆ ಮಳೆಯು ಸರಾಸರಿಗಿಂತ ಕಡಿಮೆಯಾಗಿದೆ. ಬರ ಪರಿಸ್ಥಿತಿಯಲ್ಲಿ ರೈತರು ಬೆಳೆ ತೆಗೆಯುವುದೇ ಒಂದು ಸಾಹಸ. ಈ ನಿಟ್ಟಿನಲ್ಲಿ ಜಿಕೆವಿಕೆ ರೈತ ಸ್ನೇಹಿ ಹಾಗೂ ಪರ್ಯಾಯ ತಳಿ ಪರಿಚಯಿಸಲು ಮುಂದಾಗಿದೆ. ಈ ತಳಿಗಳಿಂದ ಕಡಿಮೆ ನೀರು ಬಳಸಿಕೊಂಡು ಅತ್ಯಧಿಕ ಇಳುವರಿಯ ಜತೆಗೆ ಉತ್ತಮವಾದ ಮಾರುಕಟ್ಟೆಯ ಧಾರಣೆಯನ್ನು ಪಡೆಯಬಹುದಾಗಿದೆ. ಯಾವ ಮಣ್ಣಿನಲ್ಲಿಯಾದರೂ ಅತ್ಯಂತ ಸುಲಭವಾಗಿ ಬೆಳೆಯಬಹುದಾದ ಬೆಳೆಯಾಗಿದೆ.

ಬಾಟೆಲ್‌ ಬದನೆ ಕಾಯಿ: ಬಾಟೆಲ್‌ ಬದನೆ ಕಾಯಿ ಸೌತ್‌ಇಸ್ಟ್‌ ಏಷ್ಯಾದ ಎಸ್‌ವಿಐ 574ಇವಿ ತಳಿಯಾಗಿದೆ. ಅತ್ಯಂತ ರುಚಿಕರವಾದ ಬದನೆ ಕಾಯಿ ಇದಾಗಿದೆ. ಒಂದು ಹೆಕ್ಟರ್‌ಗೆ 75 ರಿಂದ 80 ಗ್ರಾಂ ಬೀಜ ನಾಟಿ ಮಾಡಿದರೆ ಸುಮಾರು 180 ರಿಂದ 200 ದಿನದಲ್ಲಿ ಹೂವು ಬಿಟ್ಟು ಕಾಯಿಗಳು ಕಟಾವಿಗೆ ಬರಲಿದೆ. ಒಂದು ಕಾಯಿ ಸುಮಾರು 900 ಗ್ರಾಂ ನಿಂದ ಒಂದೂವರೆ ಕೆಜಿ
ತೂಕವಿರಲಿದೆ.

ಮಾರುಕಟ್ಟೆಯಲ್ಲಿ ಕೆ.ಜಿ.ಗೆ 80 ರೂ.ದರವಿದೆ. ಇತರೆ ಸಣ್ಣ ಬದನೆ ಕಾಯಿಗೆ 30 ರೂ. ದರವಿದೆ. ಹೆಕ್ಟೇರ್‌ಗೆ 150 ರಿಂದ 160 ಟನ್‌ ಇಳುವರಿ ಸಿಗಲಿದೆ. ಸಣ್ಣ ಬದನೆ ಕಾಯಿ ಕೇವಲ 30 ಟನ್‌ ಇಳುವರಿ ಸಿಗಲಿದೆ. ಈ ಹೊಸ ತಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕಡಿಮೆ ನೀರು ಬಳಸಿಕೊಂಡು ಹಸಿರು ಮನೆ ಅಥವಾ ಹೊರವಲಯದ ಹೊಲದಲ್ಲಿ ಬೆಳೆ ತೆಗೆಯಬಹುದಾಗಿದೆ. ಕಾಯಿ ಭಾರವಿರುವ ಹಿನ್ನೆಲೆಯಲ್ಲಿ ಬಳ್ಳಿಯ ಆಸರೆ ಅಗತ್ಯವಿದೆ.

ಅಲಂಕಾರಿಕ ಸೂರ್ಯ ಕಾಂತಿ: ಜಿಕೆವಿಕೆ ಈ ಬಾರಿ ರೈತರಿಗೆ ಕಡಿಮೆ ಅವಧಿಯಲ್ಲಿ ಅತ್ಯಧಿಕ ಇಳುವರಿ ಪಡೆದು ಲಾಭ ಮಾಡಬಹುದಾದ ಅಲಂಕಾರಿಕ ಸೂರ್ಯಕಾಂತಿಯನ್ನು ರೈತರಿಗೆ ಪರಿಚಯಿಸುತ್ತಿದೆ. ಸೂರ್ಯಕಾಂತಿಯಲ್ಲಿ ಬೀಜ ಇರುವುದಿಲ್ಲ. ಕೇವಲ ಅಲಂಕಾರಕ್ಕೆ ಬಳಕೆ ಮಾಡಬಹುದಾಗಿದೆ. ಮಾರುಕಟ್ಟೆಯಲ್ಲಿ ಒಂದು ಹೂವಿನ ಬೆಲೆಯು 10 ರಿಂದ 15ರೂ. ಇದೆ. ನಾಟಿ ಮಾಡಿದ 40 ರಿಂದ 50 ದಿನದೊಳಗೆ ಕಟಾವಿಗೆ ಬರಲಿದೆ. ಕಾಂಡ ಸಮೇತ 90 ಸೆಂ.ಮೀ. ಹೂವನ್ನು 10ದಿನಗಳ ಕಾಲ ಸಂರಕ್ಷಣೆ ಮಾಡಬಹುದಾಗಿದೆ. ಒಂದು ಹೆಕ್ಟರ್‌ನಲ್ಲಿ 1.10 ಲಕ್ಷ ಗಿಡಗಳನ್ನು ನೆಡಬಹುದಾಗಿದೆ. ಇದಕ್ಕೆ
ಅಲ್ಪ ಪ್ರಮಾಣ ನೀರು ಸಾಕು. ಹಸಿರು ಮನೆಯಲ್ಲಿ ಬೆಳೆಸಿದರೆ ಉತ್ತಮ ಗುಣಮಟ್ಟ ಇಳುವರಿ ಸಿಗಲಿದೆ.

Advertisement

ಹೊಲದಲ್ಲಿ ಸಹ ಬೆಳೆಸಬಹುದಾಗಿದೆ. ಈ ಹೂವು ಅಲಂಕಾರಕ್ಕೆ ಮಾತ್ರ ಬಳಕೆಯಾಗಲಿದೆ. ಇದರಲ್ಲಿ ಬೀಜಗಳು ಇರುವುದಿಲ್ಲ. ಎಣ್ಣೆಗೆ ಬಳಕೆಯಾಗುವ ಸೂರ್ಯ ಕಾಂತಿಯ ಕಟಾವಿಗೆ 90 ದಿನಗಳ ಬೇಕಾಗುತ್ತದೆ.

ಚೆರ್ರಿ ಟೊಮ್ಯಾಟೋ: ಚೆರ್ರಿ ಟೊಮ್ಯಾಟೋ ಪೆರು ದೇಶದ ತಳಿಯಾಗಿದೆ. ನಾಟಿ ಮಾಡಿದ 160-180 ದಿನದಲ್ಲಿ ಕಟಾವಿಗೆ ಬರಲಿದೆ. ಒಂದು ಹೆಕ್ಟರ್‌ಗೆ 40 ರಿಂದ 50 ಟನ್‌ ಇಳುವರಿ ಪಡೆಯಬಹುದಾಗಿದೆ. ಇದನ್ನು ಹೊಟೇಲ್‌ನಲ್ಲಿ ಸಾಂಬಾರು, ಫಾಸ್ಟ್‌ ಫ‌ುಡ್‌, ಸಲಾಡ್‌ ಮಾಡಲು ಅತ್ಯಧಿಕ ಪ್ರಮಾಣದಲ್ಲಿ ಬಳಕೆಯಾಗಲಿದೆ. ಇದರ ಮಾರುಕಟ್ಟೆಯ ದರವು ಹೆಚ್ಚಿನ ಸಂದರ್ಭದಲ್ಲಿ ಸ್ಥಿರವಾಗಿ ಇರಲಿದೆ. ಸಾಮಾನ್ಯ ಟೊಮ್ಯಾಟೋ 20 ರಿಂದ 30 ರೂ. ಇದ್ದರೆ ಚೆರ್ರಿ ಟೊಮ್ಯಾಟೋ 50 ರಿಂದ 70 ರೂ. ಇರುತ್ತದೆ.

ಕೃಷಿ ಮೇಳ ಯಾವಾಗ?:
ನ.17, 18, 19
ಎಲ್ಲಿ?: ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣ

ಈ ಸಲದ ಕೃಷಿ ಮೇಳದಲ್ಲಿ ಜಿಕೆವಿಕೆ ರೈತರಿಗೆ ಮೂರು ಪರ್ಯಾಯ ಬೆಳೆಗಳನ್ನು ಪರಿಚಯಿಸುತ್ತಿದೆ. ಇವುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆಯಿದ್ದು, ಹಸಿರು ಮನೆಯೊಳಗೆ ಬೆಳೆಸಿದರೆ ಉತ್ತಮ ಇಳುವರಿ ಸಹ ಸಿಗಲಿದೆ. ಬರ ಪರಿಸ್ಥಿತಿಯಲ್ಲಿ ಕಡಿಮೆ ನೀರು ಬಳಸಿಕೊಂಡು ಉತ್ತಮ ಇಳುವರಿಯನ್ನು ಈ ಮೂರು ತಳಿಗಳಿಂದ ಪಡೆಯ ಬಹುದಾಗಿದೆ.
● ಡಾ.ಕೆ.ಎನ್‌.ಶ್ರೀನಿವಾಸಪ್ಪ, 
ಕೃಷಿ ವಿಜ್ಞಾನಿ, ಜಿಕೆವಿಕೆ ಬೆಂಗಳೂರು

*ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next