Advertisement

Bengaluru: ಕಾರಿನಲ್ಲಿದ್ದ 13 ಲಕ್ಷ ಮೌಲ್ಯದ ಚಿನ್ನ ಕದ್ದಿದ್ದ ಆರೋಪಿ ಬಂಧನ

10:34 AM Oct 26, 2024 | Team Udayavani |

ಬೆಂಗಳೂರು: ಕಾರಿನ ಬಾಗಿಲನ್ನು ಸ್ಕೇಲ್‌ನಿಂದ ಮೀಟಿ ಹಣ, ಚಿನ್ನಾಭರಣಗಳಿದ್ದ ಬ್ಯಾಗ್‌ ಲಪಟಾಯಿಸಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ ನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್‌ ವಾಸಿಫ್ ಬಂಧಿತ ಆರೋಪಿ. ಈತನಿಂದ 144 ಗ್ರಾಂ ಚಿನ್ನಾಭರಣ, 2 ಲಕ್ಷ ರೂ. ನಗದು ಹಾಗೂ 1 ಕಾರು ಸೇರಿದಂತೆ 13.75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

Advertisement

ಹೆಣ್ಣೂರು ಪೊಲೀಸ್‌ ಠಾಣಾ ಸರಹದ್ದಿನ, ಕೊಕನೆಟ್‌ ಬೂಟ್‌ಲೇಔಟ್‌ನಲ್ಲಿ ವಾಸವಿರುವ ಮಹಿಳೆಯೊಬ್ಬರು ತನ್ನ ಪತಿಯ ಚಿಕಿತ್ಸೆಗಾಗಿ ತಂಗಿಯ ಮಗನ ಜೊತೆಯಲ್ಲಿ ಸೆ.19ರಂದು ಆಸ್ಪತ್ರೆಗೆ ಹೋಗಬೇಕಾಗಿತ್ತು. ಆಸ್ಪತ್ರೆಯ ಹತ್ತಿರದ ಒಂದು ಕಿರಿದಾದ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ, ತಂಗಿಯ ಮಗನ ಜೊತೆ ತುರ್ತಾಗಿ ಆಸ್ಪತ್ರೆಯ ಒಳಗೆ ಹೋಗಿದ್ದರು. ಹಣ, ಚಿನ್ನದ ಒಡವೆಗಳಿದ್ದ ಬ್ಯಾಗ್‌ ಅನ್ನು ಕಾರಿನಲ್ಲಿಯೇ ಬಿಟ್ಟು ಹೋಗಿದ್ದರು. ಆಸ್ಪತ್ರೆಯ ಒಳಗೆ ಹೋಗಿ ಬಂದು ನೋಡಿದಾಗ ಕಾರಿನಲ್ಲಿದ್ದ ಹಣ, ಒಡವೆ ಕಳವು ಆಗಿರುವುದು ಕಂಡು ಬಂದಿತ್ತು.

ಮಹಿಳೆಯು ಈ ಬಗ್ಗೆ ಬಾಣಸವಾಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಸ್ಕೇಲ್‌ನಿಂದ ಕಾರಿನ ಬಾಗಿಲು ತೆರೆದು ಕಳವು: ವಿಚಾರಣೆ ವೇಳೆ ಕಳವು ಮಾಡಿದ ಚಿನ್ನಾಭರಣ ಹಾಗೂ ನಗದು ಹಣವನ್ನು ತನ್ನ ಕಾರಿನಲ್ಲಿಟ್ಟಿರುವುದಾಗಿ ಆರೋಪಿ ತಿಳಿಸಿದ್ದ. ಈಜೀಪುರ ಮುಖ್ಯರಸ್ತೆಯಲ್ಲಿ ಆರೋಪಿಗೆ ಸಂಬಂಧಿಸಿದ ಕಾರಿನಿಂದ ಪೊಲೀಸರು 144 ಗ್ರಾಂ ಚಿನ್ನಾಭರಣ, 2 ಲಕ್ಷ ನಗದು ಹಣ ಹಾಗೂ ಆತನ ಕಾರನ್ನು ಜಪ್ತಿ ಮಾಡಿದ್ದಾರೆ. ಆರೋಪಿಯು ವೃತ್ತಿಯಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ. ಆರೋಪಿಯು ಸ್ಕೇಲ್‌ ಬಳಸಿ ಕಾರಿನ ಲಾಕ್‌ ಓಪನ್‌ ಮಾಡಿ ಕಾರಿನ ಬಾಗಿಲು ತೆರೆದು ಅದರಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next