ಬೆಂಗಳೂರು: ಚಿನ್ನದ ವ್ಯಾಪಾರಿಯೊಬ್ಬರು ಗುಜರಾತ್‌ಗೆ ಜಾತ್ರೆಗೆ ಹೋದ ವೇಳೆ ಮನೆಯಲ್ಲಿದ್ದ 15.15 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದನ್ನು ಅದೇ ಮನೆಯಲ್ಲಿದ್ದ ನೇಪಾಳ ಮೂಲದ ಸೆಕ್ಯೂರಿಟಿಗಾರ್ಡ್ ದೋಚಿರುವ ಪ್ರಕರಣ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೇಪಾಳ ಮೂಲದ ನಮ್ರಾಜ್ ಆರೋಪಿ. ವಿಜಯನಗರದ ನಿವಾಸಿ ಸುರೇಂದ್ರ ಕುಮಾರ್ ಜೈನ್ ಎಂಬವರ ಮನೆಯಲ್ಲಿ ಕಳುವಾಗಿದ್ದು, ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಗಡಿ ರಸ್ತೆಯ ವಿದ್ಯಾರಣ್ಯನಗರದಲ್ಲಿ ಸುಮಾರು 30 ವರ್ಷಗಳಿಂದ ಸುರೇಂದ್ರ ಕುಮಾರ್ ಜೈನ್ ಚಿನ್ನಾಭರಣ ವ್ಯಾಪಾರವನ್ನು ಮಾಡಿಕೊಂಡಿದ್ದರು. ಇವರ ಅಂಗಡಿಯಲ್ಲಿ 7 ಜನ ಹುಡುಗರು ಕೆಲಸ ಮಾಡಿಕೊಂಡಿದ್ದು, ಆ ಪೈಕಿ 6 ಮಂದಿ ತಮ್ಮ ಸ್ವಂತ ಮನೆಗಳಲ್ಲಿ ವಾಸವಾಗಿರುತ್ತಾರೆ. ಇವರ ಅಂಗಡಿ ಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಆರೋಪಿ ನಮ್ರಾಜ್‌ಗೆ ಮನೆ ಇಲ್ಲದ ಕಾರಣ ಸುರೇಂದ್ರ ಕುಮಾರ್ ಜೈನ್ ತನ್ನ ಮನೆಯ ಪಾರ್ಕಿಂಗ್ ಸ್ಥಳದಲ್ಲಿರುವ ಸೆಕ್ಯೂರಿಟಿ ರೂಮ್‌ನಲ್ಲಿ 6 ತಿಂಗಳಿನಿಂದ ನಮ್ರಾಜ್‌ಗೆ ವಾಸ್ತವ್ಯ ಕಲಿಸಿದ್ದ. ಈ ವೇಳೆ ಜೈನ್ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ. ಸುರೇಂದ್ರ ಕುಮಾರ್ ಜೈನ್ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಹಣವನ್ನು ಇಡುವ ವಿಚಾರ ತಿಳಿದುಕೊಂಡಿದ್ದ. ನ.1 ರಂದು ಸುರೇಂದ್ರ ಕುಟುಂಬದ ಜತೆ ಗುಜರಾತ್‌ನ ಗಿರ್ನಾರ್‌ಗೆ ಪ್ರವಾಸ ತೆರಳಿದ್ದರು. ನ.7ರಂದು ಮುಂಜಾನೆ ವಾಪಾಸ್ಸಾದಾಗ ಸುಮಾರು 15.15 ಕೋಟಿ ಮೌಲ್ಯದ ಚಿನ್ನಾಭರಣ, ನಗದು ಕಳುವಾಗಿ ರುವುದು ಕಂಡು ಬಂದಿತ್ತು. ಆತಂಕಗೊಂಡ ಸುರೇಂದ್ರ ಸೆಕ್ಯೂರಿಟಿಗಾರ್ಡ್‌ನನ್ನು ಹುಡುಕಿದಾಗ ಆತ ನಾಪತ್ತೆಯಾಗಿದ್ದ. ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಮ್ರಾಜ್ ಕಳವು ಮಾಡಿಕೊಂಡು ಹೋಗಿದ್ದಾನೆ ಎಂದು ಜೈನ್ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ ಇಟ್ಟಿದ್ದ ವ್ಯಾಪಾರಿ
ಅಂಗಡಿಯಲ್ಲಿ ವ್ಯಾಪಾರ ಮಾಡಿ ತಂದಿಟ್ಟಿದ್ದ 37.80 ಲಕ್ಷ ರೂ., ಮನೆಯಲ್ಲಿ ಇಟ್ಟಿದ್ದ ಉಳಿತಾಯದ ಹಣ 3 ಲಕ್ಷ ರೂ., ನಗದು 40.80 ಲಕ್ಷ ರೂ., ಸುರೇಂದ್ರ ಕುಮಾರ್ ಜೈನ್ ಪತ್ನಿ ಸಾರಿಕಾ ಜೈನ್ ಅವರ ಸುಮಾರು 1,480 ಗ್ರಾಂ ತೂಕದ ಚಿನ್ನಾಭರಣಗಳು, ತಾಯಿ ತಾರಾ ಬಾಯಿ ಅವರ ಸುಮಾರು 465 ಗ್ರಾಂ ಚಿನ್ನಾಭರಣಗಳು, ಪುತ್ರ ಸಾವನ್ ಜೈನ್‌ರ ಸುಮಾರು 240 ಗ್ರಾಂ ಚಿನ್ನಾಭರಣ, ಮತ್ತೂಬ್ಬ ಪುತ್ರ ಸಕ್ಷಮ್‌ರ ಸುಮಾರು 220 ಗ್ರಾಂ ಚಿನ್ನ, ಸ್ವಂತ ಚಿನ್ನಾಭರಣ ಸುಮಾರು 430 ಗ್ರಾಂ ಚಿನ್ನ ಕಳುವಾಗಿದೆ.
ಇನ್ನು ಸುರೇಂದ್ರ ಕುಮಾರ್ ಜೈನ್ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ನಮ್ರಾಜ್ ಇರುವುದರಿಂದ ಇವರ ಐವರು ಅಕ್ಕಂದಿರು ಭದ್ರತೆಯ ದೃಷ್ಟಿಯಿಂದ ಜಾತ್ರೆಗೆ ಹೋಗಿ ಬರುವವರೆಗೂ ತಮ್ಮ 2,790 ಗ್ರಾಂ ಚಿನ್ನಾಭರಣ ಇಟ್ಟುಕೊಳ್ಳುವಂತೆ ಹೇಳಿದ್ದರು. ಇನ್ನು ಅಂಗಡಿಯಲ್ಲಿ ವ್ಯಾಪಾರಕ್ಕೆ ಇಟ್ಟಿದ್ದ ಚಿನ್ನದ ಬಿಸ್ಕೆಟ್‌ಗಳು, ವಜ್ರದ ಆಭರಣಗಳು, ಗಿರವಿ ಇಟ್ಟುಕೊಂಡಿದ್ದ ಚಿನ್ನಾಭರಣಗಳು ಹಾಗೂ ವ್ಯಾಪಾರದ ಹೆಚ್ಚುವರಿ ಚಿನ್ನಾಭರಣಗಳನ್ನು ಊರ ಜಾತ್ರೆಗೆ ಹೋಗಬೇಕಾಗಿದ್ದರಿಂದ ಅಂಗಡಿಯಲ್ಲಿದ್ದರೆ ಸುರಕ್ಷತೆ ಇರುವುದಿಲ್ಲವೆಂದು 12,812 ಗ್ರಾಂಗಳ ಚಿನ್ನಾಭರಣಗಳನ್ನು ಸುರೇಂದ್ರ ಕುಮಾರ್ ಮನೆಯಲ್ಲಿ ತಂದು ಇಟ್ಟಿದ್ದರು.