ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ವ್ಹೀಲಿಂಗ್ ಹಾವಳಿ ಹೆಚ್ಚಾಗಿದ್ದು, ಅದಕ್ಕೆ ಕಡಿವಾಣ ಹಾಕಲು ನಗರ ಸಂಚಾರ ಪೊಲೀಸರು ಸನ್ನದ್ದರಾಗಿದ್ದಾರೆ. ಈ ಬೆನ್ನಲ್ಲೇ ನೇರವಾಗಿ, ಸಾರ್ವಜನಿಕ ದೂರು ಗಳು ಹಾಗೂ ಸಿಗ್ನಲ್ ಗಳ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ವ್ಹೀಲಿಂಗ್ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಜತೆಗೆ ಅಪ್ರಾಪ್ತರ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳುತ್ತಿದ್ದಾರೆ.
ಒಂದೆಡೆ ಸುಗಮ ಸಂಚಾರ ಹಾಗೂ ನಿರ್ವಹಣೆಗಾಗಿ ಸಂಚಾರ ಪೊಲೀಸರು ಸಂಚಾರ ನಿಯಮ ಪಾಲನೆ ಹಾಗೂ ವ್ಹೀಲಿಂಗ್ ಮಾಡದಂತೆ ಎಚ್ಚರಿಕೆ ನೀಡಿದರೂ ಕೆಲ ಯುವಕರು ಹಾಗೂ ಅಪ್ತಾಪ್ತರು ವ್ಹೀಲಿಂಗ್ ಮಾಡುವಲ್ಲಿ ನಿರತರಾಗಿದ್ದಾರೆ. ಅಂತಹ ವ್ಹೀಲಿಂಗ್ ಮಾಡುವವರ ವಿರುದ್ಧ ಸಂಚಾರ ಪೊಲೀಸರು ಕಳೆದ ಜೂನ್ ಅಂತ್ಯಕ್ಕೆ ನಗರ ದಲ್ಲಿ 225 ವ್ಹೀಲಿಂಗ್ ಪ್ರಕರಣಗಳನ್ನು ದಾಖಲಿಸಿದ್ದಾರೆ. 2023ರಲ್ಲಿ 216 ಪ್ರಕರಣಗಳು ದಾಖಲಾಗಿತ್ತು.
ಹೀಗಾಗಿ, ಒಂದು ವರ್ಷದಲ್ಲಿ ದಾಖಲಾಗುವಷ್ಟು ಪ್ರಕರಣಗಳು ಕಳೆದ 6 ತಿಂಗಳಲ್ಲೇ ದಾಖಲಾಗಿದ್ದು, ವ್ಹೀಲಿಂಗ್ ಮಾಡು ವವರಿಗೆ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ವ್ಹೀಲಿಂಗ್ ಹಾಟ್ ಸ್ಪಾಟ್‌ಗಳು: ಯುವಕರು ಸಂಚಾರ ದಟ್ಟಣೆಯಿಲ್ಲದ ಪ್ರದೇಶಗಳಲ್ಲಿ ವ್ಹೀಲಿಂಗ್ ಮಾಡುವುದು ಹೆಚ್ಚಾಗಿದೆ.
ನಗರದ ಹೊರವರ್ತುಲ ರಸ್ತೆಗಳು, ಏರ್‌ಪೋರ್ಟ್, ನೈಸ್ ರಸ್ತೆ, ಸುಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ ರಸ್ತೆ, ಹೆಬ್ಟಾಳ ರಸ್ತೆ, ಶಿವಾಜಿನಗರ ರಸ್ತೆ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಹಾಗೂ ಮೇಲುಸೇತುವೆಗಳಲ್ಲಿ ವ್ಹೀಲಿಂಗ್ ಮಾಡುವುದಲ್ಲದೆ, ರೋಡ್ ರೇಜ್ ಪ್ರಕರಣಗಳಲ್ಲೂ ಭಾಗಿಯಾಗಿರುವ ನಿರ್ದಶನಗಳಿವೆ. ಅದರಿಂದ ಅಪಘಾತಗಳು ಸಂಭವಿಸಿರುವ ನಿದರ್ಶನಗಳಿವೆ.
ಅಪ್ರಾಪ್ತರಿಗೆ ಬೈಕ್‌ಗಳನ್ನು ಕೊಟ್ಟ ಪೋಷಕರು ಅಥವಾ ಮಾಲೀಕರ ಪರೋಕ್ಷವಾಗಿ ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ. ಆದರಿಂದ ಅವುಗಳಿಗೆ ಬ್ರೇಕ್ ಹಾಕಲು ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದರೆ ದ್ವಿಚಕ್ರ ಮಾಲೀಕರ ಲೈಸೆನ್ಸ್ ರದ್ದು ಮಾಡುವುದಾಗಿ ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೂ ವ್ಹೀಲಿಂಗ್ ಶೋಕಿ ಗೀಳಿಗೆ ಬಿದ್ದ ಮಕ್ಕಳಿಗೆ ವಾಹನ ಕೊಟ್ಟ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿವೆ.
26 ಆರ್‌ಸಿ, 9 ಡಿಎಲ್ ರದ್ದು: ಜೂನ್ ಅಂತ್ಯಕ್ಕೆ 225 ವ್ಹೀಲಿಂಗ್ ಪ್ರಕರಣ ದಾಖಲಾಗಿದ್ದು, ಈ ಪೈಕಿ 93 ಪ್ರಕರಣಗಳಲ್ಲಿ 26 ಮಂದಿಯ ಆರ್‌ಸಿ (ನೋಂದಣಿ ಪತ್ರ) ಅಮಾನತಿನಲ್ಲಿಡಲಾಗಿದೆ. ಇನ್ನೂ 67 ಪ್ರಕರಣಗಳಲ್ಲಿ ಆರ್‌ಸಿ ಅಮಾನತು ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ. ಜತೆಗೆ, 32 ಮಂದಿ ಸವಾರರ ಡಿಎಲ್ ರದ್ದತಿ ಕೋರಿ ಆರ್ ಟಿಒಗೆ ಪತ್ರ ಬರೆಯಲಾಗಿತ್ತು. ಈ ಪೈಕಿ 9 ಮಂದಿ ಡಿಎಲ್(ಚಾಲನಾ ಪರವಾನಗಿ) ರದ್ದುಗೊಳಿಸಲಾಗಿದೆ. 23 ಮಂದಿ ಸವಾರರ ಡಿಎಲ್ ಪರಿಶೀಲನೆ ಹಂತದಲ್ಲಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.