ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ರಾಜಾಜಿನಗರ, ಪೀಣ್ಯ ಇಂಡಸ್ಟ್ರಿಯಲ್ 2ನೇ ಹಂತ ಬಡಾವಣೆಯಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ಉತ್ತರ ತಾಲೂಕು, ಯಶವಂತಪುರ ಹೋಬಳಿ, ಪೀಣ್ಯ ಗ್ರಾಮದ ಸರ್ವೆ ನಂ.79ರ ಕೈಗಾರಿಕಾ ನಿವೇಶನ ಸಂಖ್ಯೆ 14 ಮತ್ತು 15ರ 12 ಸಾವಿರ ಚದರ ಅಡಿಯ ಪ್ರದೇಶದಲ್ಲಿ ಅನಧಿಕೃವಾಗಿ ನಿರ್ಮಾಣವಾಗಿದ್ದ ಶೆಡ್ಅನ್ನು ತೆರವುಗೊಳಿಸಿ, 12 ಕೋಟಿ ರೂ. ಮೌಲ್ಯದ ಪ್ರದೇಶವನ್ನು ಪ್ರಾಧಿಕಾರವು ವಶಪಡಿಸಿಕೊಂಡಿದೆ ಎಂದು ಬಿಡಿಎ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಈ ಪ್ರದೇಶಗಳಲ್ಲಿ ಕೈಗಾರಿಕಾ ನಿವೇಶನಗಳನ್ನು ಒತ್ತುವರಿ ಮಾಡಿಕೊಂಡು 2 ಸೈಟ್ ನಿರ್ಮಾಣ ಮಾಡಲಾಗಿತ್ತು. ಬಿಡಿಎ ಅಧಿಕಾರಿಗಳು ಈ ಪ್ರದೇಶದಲ್ಲಿ ಒತ್ತುವರಿ ತೆರವು ಮಾಡಲು ಸೂಚನೆ ನೀಡಿದ ಮೇರೆಗೆ ಬಿಡಿಎ ಆಯುಕ್ತರಿಂದ ಅನುಮತಿ ಪಡೆದು ಗುರುವಾರ ಜೆಸಿಬಿ ಯಂತ್ರದ ಮೂಲಕ ಒತ್ತುವರಿ ತೆರವು ಕಾರ್ಯ ಮಾಡಲಾಗಿದೆ.
ಈ ಕಾರ್ಯಾಚರಣೆಯನ್ನು ಬಿಡಿಎ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಲಾಯಿತು.
ಬಿಡಿಎ ಜಾಗದಲ್ಲಿದ್ದ ಹಲವು ಮನೆ ನೆಲಸಮ ಇನ್ನು ಮತ್ತೂಂದು ಪ್ರಕರಣದಲ್ಲಿ ಗೊರಗುಂಟೆಪಾಳ್ಯ ಬಳಿಯ ಆಶ್ರಯ ನಗರ ಬಡಾವಣೆಯಲ್ಲಿ ಬಿಡಿಎ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಹಲವಾರು ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಜಾಗ ಖಾಲಿ ಮಾಡಿ ಎಂದು ಬಿಡಿಎ ಸೂಚನೆ ನೀಡಿತ್ತು. ಆದರೆ, ಜಾಗ ಖಾಲಿ ಮಾಡದ ಹಿನ್ನೆಲೆ ಇಲ್ಲಿದ್ದ ಮನೆಗಳನ್ನು ತೆರವು ಮಾಡಲಾಗಿದೆ. ಮನೆಗಳನ್ನು ಬಿಡಿಎ ನೆಲಸಮ ಮಾಡಿದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.