ಕೋಲ್ಕತಾ: ನಕ್ಸಲರ ಅಡಗುದಾಣವಾಗಿದ್ದ ಪಶ್ಚಿಮ ಬಂಗಾಳದ ಲಾಲ್‌ಗಢದಲ್ಲಿ ಬಂಗಾಳ ಹುಲಿಯೊಂದು ಸಾವನ್ನಪ್ಪಿದೆ. ರಾಜ್ಯದ ಸುಂದರ್‌ಬನ್ಸ್ ಅಭಯಾರಣ್ಯದಲ್ಲಿ ಬಂಗಾಳ ಹುಲಿಗಳ ಸಂಖ್ಯೆ ನೂರಕ್ಕಿಂತಲೂ ಕಡಿಮೆ ಇದೆ. ಕಳೆದ ಮೂರು ತಿಂಗಳ ಹಿಂದೆ ಗ್ರಾಮಸ್ಥರು ಈ ಹುಲಿ ನೋಡಿದ್ದಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದರಿಂದ, ಹುಡುಕಾಟ ಆರಂಭಿಸಲಾಗಿತ್ತು. ಡ್ರೋನ್‌ಗಳನ್ನು ಬಳಸಿಯೂ ಶೋಧ ನಡೆಸಲಾಗಿತ್ತಾದರೂ, ಈವರೆಗೂ ಸುಳಿವೂ ಸಿಕ್ಕಿರಲಿಲ್ಲ. ಕಮಂಧಿ ಅರಣ್ಯ ಪ್ರದೇಶದಲ್ಲಿ ಈಗ ಹುಲಿ ಕಂಡುಬಂದಿದ್ದು, ಇದರ ಮುಖಕ್ಕೆ ಭರ್ಚಿಯಿಂದ ಚುಚ್ಚಿದ್ದು ಕಂಡುಬಂದಿದೆ. ಸಾವನ್ನಪ್ಪಿದ ಹುಲಿಗೆ ಸಮೀಪದಲ್ಲೇ ಅರ್ಧ ತಿಂದ ಕಾಡು ಹಂದಿ ಬಿದ್ದಿದೆ. ಅರಣ್ಯ ಅಧಿಕಾರಿಗಳ ಪ್ರಕಾರ, ಕಾಡು ಹಂದಿಯನ್ನು ತಿನ್ನುತ್ತಿರುವಾಗ ಇಲ್ಲಿನ ಜನರು ಭರ್ಚಿ ಎಸೆದು ಸಾಯಿಸಿದ್ದಾರೆ. ಹುಲಿ 200 ಕಿಲೋ ತೂಕವಿದ್ದು, ಗಾರ್ಬೆಟಾಗೆ ತಂದು ಪೋಸ್ಟ್ ಮಾರ್ಟಮ್ ನಡೆಸಲಾಗಿದೆ.