ಕೋಲ್ಕತ್ತಾ: ಕಾಲೇಜು ಪ್ರವೇಶಾತಿ ಅರ್ಜಿಯಲ್ಲಿ ವಿದ್ಯಾರ್ಥಿಗಳ ‘ಧರ್ಮ’ದ ಬಗ್ಗೆ ಮಾಹಿತಿ ಕೇಳುವ ಕಾಲಂ ಇರುವುದನ್ನು ನೋಡಿರುತ್ತೀರಿ. ಅದರಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಆಯ್ಕೆಗಳನ್ನೂ ಕೆಲವೊಮ್ಮೆ ನೀಡಿರಲಾಗುತ್ತದೆ. ಆದರೆ, ಪಶ್ಚಿಮ ಬಂಗಾಳದ ಕನಿಷ್ಠ 50 ಕಾಲೇಜುಗಳ ಪ್ರವೇಶಾತಿ ಅರ್ಜಿ ನೋಡಿದರೆ ನಿಮಗೆ ಅಚ್ಚರಿಯಾಗದೇ ಇರದು. ಏಕೆ ಗೊತ್ತೇ?
ಈ ಕಾಲೇಜುಗಳ ಪ್ರವೇಶ ಅರ್ಜಿಗಳಲ್ಲಿ ‘ಧರ್ಮ’ ಎಂಬ ಕಾಲಂನ ಕೆಳಗೆ ‘ಮಾನವತೆ, ನಾಸ್ತಿಕವಾದಿ, ಜಾತ್ಯತೀತ ಹಾಗೂ ಧಾರ್ಮಿಕವಲ್ಲದ’ ಎಂಬಿತ್ಯಾದಿ ಆಯ್ಕೆಗಳನ್ನು ನೀಡಲಾಗಿದೆ. ತಮ್ಮ ಧರ್ಮವನ್ನು ಬಹಿರಂಗ ಪಡಿಸಲು ಇಚ್ಛಿಸದ ವಿದ್ಯಾರ್ಥಿಗಳು ಈ ಆಯ್ಕೆಗಳ ಪೈಕಿ ಯಾವುದಕ್ಕಾದರೂ ಗುರುತು ಹಾಕಬಹುದಾಗಿದೆ.
Advertisement
ಕಾಲೇಜು ಸೇರುವಾಗ ನಮ್ಮ ಧರ್ಮಗ ಳನ್ನು ಬಹಿರಂಗಪಡಿಸಬೇಕಾದ ಅವಶ್ಯಕತೆ ಏನಿದೆ ಎಂದು ಹಲವು ಪದವಿ ಆಕಾಂಕ್ಷಿಗಳು ಪ್ರಶ್ನೆಯೆತ್ತಿದ್ದು, ಈ ಹಿನ್ನೆಲೆಯಲ್ಲಿ ಈ ರೀತಿಯ ಹೊಸ ಕ್ರಮ ಕೈಗೊಳ್ಳಲಾಗಿದೆ. ಆನ್‌ಲೈನ್ ಪ್ರವೇಶ ಅರ್ಜಿಯಲ್ಲಿ ಹೊಸ ಆಯ್ಕೆಗಳನ್ನು ಸೇರಿಸಲಾಗಿದ್ದು, ಅನೇಕ ವಿದ್ಯಾರ್ಥಿಗಳನ್ನು ಈ ಆಯ್ಕೆಗಳಿಗೇ ಗುರುತು ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.