ಕೋಲ್ಕತಾ: ಸುಲಿಗೆ, ಭೂ ಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೃಣಮೂಲ ಕಾಂಗ್ರೆಸ್ ಮುಖಂಡ ಶಹಜಹಾನ್ ಶೇಕ್ ನನ್ನು ಸಿಬಿಐಗೆ ಹಸ್ತಾಂತರಿಸಬೇಕೆಂಬ ಕೋಲ್ಕತಾ ಹೈಕೋರ್ಟ್ ಆದೇಶವನ್ನು ಪಶ್ಚಿಮಬಂಗಾಳ ಸರ್ಕಾರ ತಿರಸ್ಕರಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Arrested: ಲಾಂಗ್ ಹಿಡಿದು ಅಟ್ಟಾಡಿಸಿದ ಪುಡಿ ರೌಡಿಗಳ ಹೆಡೆಮುರಿ ಕಟ್ಟಿದ ಐಜೂರು ಪೊಲೀಸರು..!
ಪಶ್ಚಿಮಬಂಗಾಳ ಪೊಲೀಸರು ಶಹಜಹಾನ್ ನನ್ನು ಸಿಬಿಐ ವಶಕ್ಕೆ ಒಪ್ಪಿಸಬೇಕು. ಅದೇ ರೀತಿ ಮಂಗಳವಾರ ಸಂಜೆ 4.30ರೊಳಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಯನ್ನು ಹಸ್ತಾಂತರಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತ್ತು.
ಹೈಕೋರ್ಟ್ ಆದೇಶದ ನಂತರ ಸಿಬಿಐ ತಂಡ ಕೋಲ್ಕತಾ ಪೊಲೀಸ್ ಕೇಂದ್ರ ಕಚೇರಿಗೆ ತೆರಳಿತ್ತು. ಆದರೆ ಪೊಲೀಸರು ಹಸ್ತಾಂತರಕ್ಕೆ ನಿರಾಕರಿಸಿದ ಕಾರಣ ಸಿಬಿಐ ತಂಡ ಬರಿಗೈಲಿ ವಾಪಸಾಗಿದೆ. ಅದಕ್ಕೆ ಕಾರಣ ಪಶ್ಚಿಮ ಬಂಗಾಳ ಸರ್ಕಾರ ಶೇಕ್ ಹಸ್ತಾಂತರದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿರುವುದು. ಸುಪ್ರೀಂಕೋರ್ಟ್ ಆದೇಶ ನೀಡುವವರೆಗೆ ಶೇಕ್ ಹಸ್ತಾಂತರಕ್ಕೆ ರಾಜ್ಯ ಸರ್ಕಾರ ನಿರಾಕರಿಸಿರುವುದಾಗಿ ವರದಿ ವಿವರಿಸಿದೆ.
ಶೀಘ್ರ ವಿಚಾರಣೆ ನಡೆಸಬೇಕೆಂಬ ಪಶ್ಚಿಮ ಬಂಗಾಳ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಅಲ್ಲದೇ ರಾಜ್ಯದ ಪರ ವಾದ ಮಂಡಿಸುವಂತೆ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದು, ಕಾನೂನು ಪ್ರಕಾರ ಅರ್ಜಿ ವಿಚಾರಣೆಗೆ ರಿಜಿಸ್ಟ್ರಾರ್ ಜನರಲ್ ಬಳಿ ನಮೂದಿಸುವಂತೆ ತಿಳಿಸಿದೆ.
ಶಹಜಹಾನ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಜಾರಿ ನಿರ್ದೇಶನಾಲಯ ಕಾನೂನು ಮೊರೆ ಹೋಗಿದ್ದು, ಮತ್ತೊಂದೆಡೆ ಪಶ್ಚಿಮಬಂಗಾಳ ಸರ್ಕಾರ ಶಹಜಹಾನ್ ತನಿಖೆಯನ್ನು ಪೊಲೀಸ್ ಇಲಾಖೆ ನಡೆಸಲಿದೆ ಎಂದು ಕೋರ್ಟ್ ಮೆಟ್ಟಿಲೇರಿದೆ.