ಕೋಲ್ಕತಾ: ಪಶ್ಚಿಮಬಂಗಾಳದ ಭಾರತೀಯ ಜನತಾ ಪಕ್ಷದ ಯುವ ಘಟಕದ ಅಧ್ಯಕ್ಷ, ಸಂಸದ ಸುಮಿತ್ರಾ ಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇತರ ಮುಖಂಡರು ಮಧ್ಯಪ್ರವೇಶಿಸಿ ಭರವಸೆ ನೀಡಿದ ಬಳಿಕ ತಮ್ಮ ರಾಜೀನಾಮೆಯನ್ನು ಹಿಂಪಡೆದಿರುವುದಾಗಿ ಖಾನ್ ಫೇಸ್ ಬುಕ್ ನಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಜುಲೈನಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ 12 ಕೋಟಿ ಕೋವಿಡ್ ಲಸಿಕೆ ಪಡೆಯಲಿವೆ: ಕೇಂದ್ರ
“ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಎಲ್ಲಾ ಅಭಿವೃದ್ಧಿಯ ಸಾಧನೆಯನ್ನು ತಮ್ಮ ವೈಯಕ್ತಿಕ ಸಾಧನೆ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸುಮಿತ್ರಾ ಖಾನ್ ಬುಧವಾರ ಸಂಜೆ ಪಶ್ಚಿಮಬಂಗಾಳದ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ” ಫೇಸ್ ಬುಕ್ ಪೋಸ್ಟ್ ಹಾಕಿರುವುದಾಗಿ ವರದಿ ವಿವರಿಸಿದೆ.
ಪಶ್ಚಿಮಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ರಾತ್ರಿ 9ಗಂಟೆಗೆ ತಾವು ರಾಜೀನಾಮೆಯನ್ನು ಹಿಂಪಡೆಯುವುದಾಗಿ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದರು. ನಮ್ಮ ಬಿಜೆಪಿ ಮುಖಂಡರಾದ ಬಿಎಲ್ ಸಂತೋಷ್ ಜಿ, ಅಮಿತ್ ಶಾ ಜಿ ಮತ್ತು ತೇಜಸ್ವಿ ಸೂರ್ಯ ಜಿ ಅವರ ಸಲಹೆಗೆ ಗೌರವ ನೀಡಿ, ನನ್ನ ರಾಜೀನಾಮೆಯನ್ನು ವಾಪಸ್ ಪಡೆದಿರುವುದಾಗಿ ಫೇಸ್ ಬುಕ್ ನ ಮತ್ತೊಂದು ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದರು.
ಕುಂದು ಕೊರತೆಗಳನ್ನು ಪರಿಶೀಲಿಸಿ, ಸೂಕ್ತ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಕೇಂದ್ರ ಬಿಜೆಪಿ ನಾಯಕರು ಭರವಸೆ ನೀಡಿದ್ದು, ರಾಜೀನಾಮೆಯನ್ನು ಹಿಂಪಡೆಯುವಂತೆ ಒತ್ತಾಯಿಸಿರುವುದಾಗಿ ರಾಜ್ಯ ಬಿಜೆಪಿ ಮೂಲಗಳು ತಿಳಿಸಿವೆ.