Advertisement
ಮರದ ಬುಡಕ್ಕೆ ನೀರು ಬಿಡುವುದು, ಗೊಬ್ಬರ ಹಾಕುವುದು ಮಾತ್ರ ನಮ್ಮ ಕೆಲಸ. ಮರದ ಮೇಲಿನ ಸಿಂಗಾರಕ್ಕೆ ಹೂಬಿಟ್ಟು ಕಾಯಿ ಮೊಳೆಯುವಂತೆ ಮಾಡುವುದು ನಮ್ಮ ಕೈಯಲ್ಲಿಲ್ಲ. ಫಸಲು ಬಂದಷ್ಟು ಬರಲಿ ಎಂದು ಹಲವು ಕೃಷಿಕರು ಗಿಡಕ್ಕೆ ನೀರು ಗೊಬ್ಬರ ಒದಗಿಸಿ ಸುಮ್ಮನಾಗುತ್ತಾರೆ. ಸಿಂಗಾರದ ಹೂವನ್ನು ಕಾಯಾಗಿಸುವುದು ತಮ್ಮ ಕೈಯಲ್ಲಿಲ್ಲ ಎಂದು ಭಾವಿಸಿ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ, ನನ್ನ ತೋಟದಲ್ಲಿ ಹಾಗಲ್ಲ. ಹೂವು ಕಾಯಾಗಿಸಲು ಸಾವಿರಾರು ಕೆಲಸಗಾರರಿದ್ದಾರೆ. ಅವರಿಗೆ ಸಂಬಳ ಕೊಡಬೇಕೆಂದೂ ಇಲ್ಲ. ಶ್ರಮವಹಿಸಿ ದುಡಿದು ಹಣ ಗಳಿಸಿಕೊಡುವುದರ ಜೊತೆಗೆ ಬಾಯನ್ನೂ ಸಿಹಿ ಮಾಡುತ್ತಾರೆ ಎನ್ನುತ್ತ ಕೃಷಿಕ ವಿಶ್ವೇಶ್ವರ್ ಭಟ್ ಏಕಾನ್, ತಮ್ಮ ತಂಪು ತೋಟದಲ್ಲಿ ಖುಷಿಯಿಂದ ನಡೆಯುತ್ತ ಹೇಳುತ್ತಿದ್ದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳವಂತಾಯಿತು.
Related Articles
ಭಟ್ಟರು ಸಾಕಿದ ಸುಮಾರು 5,000 ಜೇನುಹುಳಗಳು ಅಡಿಕೆ ಸಿಂಗಾರದ ಪರಾಗಸ್ಪರ್ಶ ಮಾಡುತ್ತಿವೆ. ಈಗಿರುವ 18 ಜೇನುಪೆಟ್ಟಿಗೆಗಳಿಂದ ಅಡಿಕೆ ಫಸಲಿನಲ್ಲಿ ಹೆಚ್ಚಳವೊಂದೇ ಅಲ್ಲದೆ ಜೇನುತುಪ್ಪ ಮನೆಖರ್ಚಿಗೆ ಸಾಕಾಗಿ ಸ್ಥಳೀಯವಾಗಿ ಮಾರಾಟವನ್ನೂ ಮಾಡುತ್ತಿದ್ದಾರೆ. ಈ ವರ್ಷ 1 ಕ್ವಿಂಟಾಲ… 40 ಕೆ.ಜಿ ಜೇನು ಮಾರಿದ್ದಾರೆ. ಅಲ್ಲದೇ ಇಪ್ಪತ್ತು ಪೆಟ್ಟಿಗೆಯನ್ನೂ ಮಾರಿದ್ದಾರೆ. ಬಾಯಿಗೆ ಸಿಹಿಯೂ ಆಯಿತು. ಕೈಗೆ ಕಾಸೂ ಆಯಿತು’. ಜೇನು ಸಾಕಣೆ ಬೋನಸ್ ಲಾಭ ನೀಡಿದೆ ಎನ್ನುತ್ತಾರೆ. ತಾವೊಬ್ಬರೇ ಅಭಿವೃದ್ಧಿಯಾದರೆ ಸಾಲದು ಕೃಷಿಯ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಒಳಿತಾಗಬೇಕೆಂಬ ಕಾಳಜಿ ಭಟ್ಟರಿಗಿದೆ.
Advertisement
ಮಣ್ಣಿನ ಮಾರ್ಪಾಡುವಿಶ್ವೇಶ್ವರ ಭಟ್ಟರು ತಮ್ಮ ತೋಟದ ಮಣ್ಣು ಹೇಗಿರಬೇಕೆಂದು ಅವರೇ ನಿರ್ಧರಿಸುವಷ್ಟು ಸಮರ್ಥ ಕೃಷಿಕರು. ಸಂಪೂರ್ಣ ಸಾವಯವ ವಿಧಾನವನ್ನು ಅನುಸರಿಸಿ ತೋಟದ ಮಣ್ಣಿನ ಗುಣಮಟ್ಟವನ್ನು ಹಸನುಗೊಳಿಸಿದ್ದಾರೆ. ಕೊಟ್ಟಿಗೆಯ ಗೊಬ್ಬರದ ಗುಂಡಿಯ ತಳಭಾಗದಲ್ಲಿ ಫಿಲ್ಟರ್ ಅಳವಡಿಸಿ ಕಸ ಕಡ್ಡಿಯೆಲ್ಲವೂ ಅಲ್ಲೇ ತಳವೂರುವಂತೆ ಮಾಡಿದರು. ಸಂಗ್ರಹವಾದ ಗೋಬರ್ ಗ್ಯಾಸಿನ ಸ್ಲರಿ, ಕೊಟ್ಟಿಗೆ ತೊಳೆದ ನೀರು ಮತ್ತು ಗೋಮೂತ್ರ ಮಿಶ್ರಿತ ದ್ರಾವಣವನ್ನು ಟ್ಯಾಂಕಿಗೆ ಹಾಯಿಸಿ ಅಲ್ಲಿಂದ ಪೈಪುಗಳ ಮೂಲಕ ತೋಟಕ್ಕೆ ಹರಿಸಿದರು. ತೋಟ ತಗ್ಗು ಪ್ರದೇಶದಲ್ಲಿರುವುದರಿಂದ ವಿದ್ಯುತ್ತಿನ ಅವಶ್ಯವೇ ಇರದೇ ಪ್ರತೀ ಮರಕ್ಕೂ ಕಾಲಕಾಲಕ್ಕೆ ಸಮಪ್ರಮಾಣದಲ್ಲಿ ಈ ದ್ರಾವಣವನ್ನು ನೀಡಲು ಅನುಕೂಲವಾಗಿದೆ. ಭಟ್ಟರಿಗೆ ರಾಸಾಯನಿಕ ಗೊಬ್ಬರ ಹಂಗಿಲ್ಲ. ಏಕೆಂದರೆ, ತಾವು ಸಾಕಿದ ಗೋವುಗಳ ಸಹಾಯದಿಂದಲೇ ಭೂಮಿಯನ್ನು ಫಲವತ್ತುಗೊಳಿಸಿದ್ದಾರೆ. ಕಳೆ ನಿರೋಧಕ
ಕಳೆ ಕಡಿಮೆ ಮಾಡಲು ಇವರು ತೋಟದಲ್ಲಿ 300 ಸನ್ನೆಂಪಿನ ಗಿಡ ಬೆಳೆಸಿದರು. ಇದರಿಂದ ತೋಟಕ್ಕೆ ಸೊಪ್ಪಿಗಾಗಿ ಬೆಟ್ಟದ ಮೊರೆ ಹೋಗುವುದು ತಪ್ಪಿತು. ಕಳೆ ಕೀಳಲು ಕೂಲಿ ಕಾರ್ಮಿಕರಿಗಾಗಿ ದುಂಬಾಲು ಬೀಳುವ ಪರಿಸ್ಥಿತಿಯೂ ಎದುರಾಗಲಿಲ್ಲ. ಸನ್ನೆಂಪಿನ ಬೇರುಗಳು ಮಣ್ಣಿನಲ್ಲಿ ಸಾರಜನಕದ ಅಂಶವನ್ನು ಹೆಚ್ಚಿಸಿ, ಅಡಿಕೆ ಮರಗಳನ್ನು ಇನ್ನಷ್ಟು ಸಬಲಗೊಳಿಸಿದೆ. ಕಾರ್ಮಿಕರು, ತೋಟ ನೋಡಲು ಬಂದವರು ಅಲ್ಲಿ ಪ್ಲಾಸ್ಟಿಕ್ಕಿನ ಚಿಕ್ಕ ತುಂಡನ್ನೂ ಎಸೆಯಬಾರದು ಎಂದು ನಿಯಮ ಮಾಡಿದ್ದಾರೆ. ಪ್ಲಾಸ್ಟಿಕ್ ಎಸೆಯುವ ಪ್ರಸಂಗ ಬಂದರೆ ಅದಕ್ಕೆಂದೇ ಅಡಿಕೆ ಮರಕ್ಕೆ ಅಲ್ಲಲ್ಲಿ ಚೀಲ ಕಟ್ಟಿ ಭೂಮಿಗೆ ಒಂದಂಶವೂ ಪ್ಲಾಸ್ಟಿಕ್ ಸೇರಬಾರದೆಂಬ ಎಚ್ಚರಿಕೆ ವಹಿಸಿದ್ದಾರೆ. ಜೇನು ಸಾಕಣೆ, ಮಣ್ಣಿನ ಗುಣಮಟ್ಟದಲ್ಲಿ ಹೆಚ್ಚಳ, ಪ್ಲಾಸ್ಟಿಕಿನ ನಿಷೇಧ ಹೀಗೆ ಅವರಿಗೆ ತಮ್ಮ ಕೃಷಿ ಪ್ರಯೋಗಗಳೆಲ್ಲವೂ ಯಶಸ್ವಿಯಾಗುತ್ತಿರುವ ಕುರಿತು ಸಹಜವಾಗಿ ಹೆಮ್ಮೆಯಿದೆ. ಯುವಕರು ಕೃಷಿ ಮಾಡಬೇಕು. ಬರೀ ಮಾಡುವುದಷ್ಟೇ ಅಲ್ಲ, ಸಾವಯವ ವಿಧಾನದಲ್ಲೇ ಮಾಡಿ ಲಾಭ ಗಳಿಸಬೇಕು ಎಂಬುದು ಅವರ ದಿಟ್ಟ ನುಡಿ. – ಗುರುಗಣೇಶ ಭಟ್ ಡಬ್ಗುಳಿ