ಹುಬ್ಬಳ್ಳಿ: ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿಯನ್ನು ಮುಂದಿನ ಐದು ವರ್ಷಗಳಿಗೆ ನವೀಕರಣಗೊಳಿಸಿ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣ ತೀರ್ಪು ನೀಡಿದೆ.
ರಹದಾರಿ ಪರವಾನಗಿ ಅವಧಿ ಮುಗಿಯುತ್ತಿದ್ದ ಪರಿಣಾಮ ಬೇಂದ್ರೆ ಸಾರಿಗೆ ಮಾಲೀಕರು ನವೀಕರಣ ಮಾಡುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಆದರೆ ಅವಳಿ ನಗರದಲ್ಲಿ ಬಿಆರ್‌ಟಿಎಸ್ ಯೋಜನೆ ಅನುಷ್ಠಾನಗೊಂಡಿರುವ ಹಿನ್ನೆಲೆಯಲ್ಲಿ ಸರಕಾರ ಬೇಂದ್ರೆ ಸಾರಿಗೆ ರಹದಾರಿ ಪರವಾನಗಿ ನವೀಕರಿಸದಂತೆ ಅಧಿಸೂಚನೆ ಹೊರಡಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಬೇಂದ್ರೆ ಸಾರಿಗೆ ರಹದಾರಿ ಪರವಾನಗಿ ನವೀಕರಣ ಅರ್ಜಿಯನ್ನು ತಿರಸ್ಕರಿಸಿತ್ತು. ಕನಿಷ್ಠ 4 ತಿಂಗಳ ಮಟ್ಟಿಗೆ ತಾತ್ಕಾಲಿಕ ಪರವಾನಗಿಗಾಗಿ ಸಲ್ಲಿಸಿದ ಅರ್ಜಿಯನ್ನೂ ಸಾರಿಗೆ ಪ್ರಾಧಿಕಾರ ತಿರಸ್ಕರಿಸಿತ್ತು.
ನ್ಯಾಯ ಕೋರಿ ಮೇಲ್ಮನವಿ: ಆರ್‌ಟಿಎ ನಿರ್ಧಾರದ ವಿರುದ್ಧ ಬೇಂದ್ರೆ ಸಾರಿಗೆ ಪರವಾಗಿ ರಾಮವಿಜಯ ಟ್ರಾವೆಲ್ಸ್ನ ಮಹಾದೇವ ನಾಯ್ಕ, ಎಚ್. ಪ್ರಸಾದ ಬಲ್ಲಾಳ ಅವರು ರಹದಾರಿ ಪರವಾನಗಿ ನವೀಕರಿಸುವಂತೆ ರಾಜ್ಯ ಸಾರಿಗೆ ಮೇಲ್ಮನವಿಗಳ ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ 15 ವರ್ಷಗಳಿಂದ ಅವಳಿ ನಗರದ ನಡುವೆ ಸಾರಿಗೆ ಸೇವೆ ನೀಡುತ್ತಿದ್ದು, ಇದೀಗ ಏಕಾಏಕಿ ರಹದಾರಿ ಪರವಾನಗಿ ನವೀಕರಣ ಹಾಗೂ ತಾತ್ಕಾಲಿಕ ಪರವಾನಗಿ ನೀಡಲು ಆರ್‌ಟಿಎ ನಿರಾಕರಿಸಿದೆ. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದರು.
ಮನವಿಗೆ ದೊರೆತ ಮನ್ನಣೆ: ಮನವಿ ಆಲಿಸಿದ ಸಾರಿಗೆ ನ್ಯಾಯಾಧಿಕರಣ ಅವಳಿ ನಗರದ ಜನರಿಗೆ ಸಾರಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣ ನೀಡಿ 2019 ಜೂ. 26ರ ಯಥಾಸ್ಥಿತಿ (ಸ್ಟೇಟೆಸ್ಕೋ ) ಕಾಯ್ದುಕೊಳ್ಳುವಂತೆ ಸೂಚನೆ ನೀಡಿ ವಿಚಾರಣೆಗೆ ಆದೇಶಿಸಿತ್ತು. ಹೀಗಾಗಿ 41 ಬಸ್‌ಗಳು ಅವಳಿ ನಗರದ ನಡುವೆ ಸಂಚರಿಸುವಂತಾಗಿತ್ತು. ಜು. 15ರ ವೇಳೆಗೆ ಸುಮಾರು 38 ಬಸ್‌ಗಳ ರಹದಾರಿ ಪರವಾನಗಿ ಪೂರ್ಣಗೊಂಡಿದ್ದರ ಹಿನ್ನೆಲೆಯಲ್ಲಿ ಮೂರು ಬಸ್‌ಗಳ ಸಂಚಾರ ಮಾತ್ರ ಇತ್ತು. ನ್ಯಾಯಾಧಿಕರಣ ಯಥಾಸ್ಥಿತಿ ಆದೇಶ ನೀಡದೇ ಇದ್ದಿದ್ದರೆ ಆ. 19ಕ್ಕೆ ಬೇಂದ್ರೆ ಸಾರಿಗೆ ಎಲ್ಲ ಬಸ್‌ಗಳ ರಹದಾರಿ ಪರವಾನಗಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿತ್ತು. ಇದೀಗ ಪರವಾನಗಿ ನವೀಕರಗೊಂಡಿದ್ದು, ಬೇಂದ್ರೆ ಸಾರಿಗೆ ಮಾಲೀಕರು ಹಾಗೂ ನೌಕರರಲ್ಲಿದ್ದ ಆತಂಕ ದೂರವಾದಂತಾಗಿದೆ.
Advertisement
ಮೇಲ್ಮನವಿ ನ್ಯಾಯಾಧೀಕರಣ ರಹದಾರಿ ಪರವಾನಗಿ ನವೀಕರಿಸಿದ ಹಿನ್ನೆಲೆಯಲ್ಲಿ ಬೇಂದ್ರೆ ಸಾರಿಗೆಯ 41 ಬಸ್‌ಗಳು ಅವಳಿ ನಗರದ ನಡುವೆ ಸಂಚರಿಸಲಿದ್ದು, ಈ ತೀರ್ಪಿನಿಂದ ಬೇಂದ್ರೆ ಸಾರಿಗೆಗೆ ದೊಡ್ಡ ಜಯ ದೊರೆತಂತಾಗಿದೆ.
Related Articles
ಆದೇಶದ ವಿರುದ್ಧ ಹೈಕೋರ್ಟ್‌ಗೆ ಮೊರೆ ಸಾಧ್ಯತೆ:
ರಾಜ್ಯ ಸಾರಿಗೆ ಮೇಲ್ಮನವಿಗಳ ನ್ಯಾಯಾಧಿಕರಣ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ನ್ಯಾಯಾಧಿಕರಣ ನೀಡಿರುವ ರಹದಾರಿ ಪರವಾನಗಿಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಲಿದ್ದಾರೆ. ಬೇಂದ್ರೆ ಸಾರಿಗೆ ಸಂಚಾರದಿಂದ ಸಾವಿರಾರು ಕೋಟಿ ರೂ. ವೆಚ್ಚದ ಸರಕಾರಿ ಯೋಜನೆ ವಿಫಲ ಸೇರಿದಂತೆ ವಿವಿಧ ಅಂಶಗಳನ್ನು ಹೈಕೋರ್ಟ್‌ಗೆ ಮನವರಿಕೆ ಮಾಡಲಾಗುವುದು. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
•ಹೇಮರಡ್ಡಿ ಸೈದಾಪುರ
Advertisement