Advertisement
ಮಹಾನಗರದ ಜನತೆಗೆ ತ್ವರಿತ ಹಾಗೂ ಮಾದರಿ ಸಾರಿಗೆ ಸೇವೆ ನೀಡಬೇಕು ಎನ್ನುವ ಕಾರಣದಿಂದ ವಿಶ್ವಸಂಸ್ಥೆ ಆರ್ಥಿಕ ನೆರವಿನಿಂದ ಬಿಆರ್‌ಟಿಎಸ್ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆಯ ಅಸ್ತಿತ್ವ, ಯಶಸ್ವಿ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಅವಳಿ ನಗರದ ನಡುವೆ ಖಾಸಗಿ ಸಮೂಹ ಸಾರಿಗೆ ರದ್ದುಗೊಳಿಸಬೇಕು ಎನ್ನುವ ನಿರ್ಧಾರ ಸರಕಾರದ್ದಾಗಿದೆ. 2019 ಮಾ. 8ರಂದು ರಾಜ್ಯ ಸರಕಾರ ಕರಡು ಅಧಿಸೂಚನೆ ಹೊರಡಿಸಿ, ಈಗಾಗಲೇ ಪರವಾನಗಿ ಪಡೆದು ಸಂಚರಿಸುತ್ತಿರುವ ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ ಅವಧಿ ಮುಗಿಯುವ ವರೆಗೆ ಚಾಲ್ತಿಯಲ್ಲಿರತಕ್ಕದ್ದು. ಈ ರಹದಾರಿ ಪರವಾನಗಿಯನ್ನು ನವೀಕರಣಗೊಳಿಸತಕ್ಕದ್ದಲ್ಲ ಎಂದು ತಿಳಿಸಿತ್ತು. ಕರಡು ಅಧಿಸೂಚನೆ ಕಾಲಾವಧಿ ಒಂದು ವರ್ಷದ್ದಾಗಿದ್ದು, 2020 ಮಾ. 7ರೊಳಗೆ ರಾಜ್ಯ ಸರಕಾರ ಅಂತಿಮ ಅಧಿಸೂಚನೆ ಹೊರಡಿಸಬೇಕಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಅಂತಿಮ ಅಧಿಸೂಚನೆ ಹೊರಡಿಸದಿದ್ದರೆ ಕರಡು ಅಧಿಸೂಚನೆ ಅರ್ಥ ಕಳೆದುಕೊಳ್ಳಲಿದೆ.
Related Articles
Advertisement
ಪರವಾನಗಿ ರದ್ದಾಗುತ್ತವೆ. 2009ರಲ್ಲಿ ರಹದಾರಿ ನವೀಕರಣ ಅರ್ಜಿಯನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಅಪಾರ ಹಣ ಖರ್ಚು ಮಾಡಿ ಬಿಆರ್‌ಟಿಎಸ್ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಕಡಿಮೆ ದರದಲ್ಲಿ ಐಷಾರಾಮಿ ಸಾರಿಗೆ ದೊರೆಯುತ್ತಿದೆ. ಹೀಗಾಗಿ ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ ನವೀಕರಣಗೊಳಿಸಬಾರದು. ಮುಂದೆ ಹೊರಡಿಸಲಿರುವ ಅಂತಿಮ ಅಧಿಸೂಚನೆಯಲ್ಲಿ ಈ ವಿಷಯ ಪ್ರಸ್ತಾಪಿಸಬೇಕು ಎಂಬುದು ವಾಯವ್ಯ ಸಾರಿಗೆ ಸಂಸ್ಥೆ ವಾದ.
ಭವಿಷ್ಯದ ಪ್ರಶ್ನೆ ಉದ್ಭವ : ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರದ 20 ಕಿಮೀ ವ್ಯಾಪ್ತಿಯಲ್ಲಿ ಖಾಸಗಿ ಪ್ರವರ್ತಕರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ರಾಜ್ಯ ಸರಕಾರದ ಅಧಿಸೂಚನೆಯ ಪ್ರಯೋಜನ ಪಡೆದ ಏಕೈಕ ಸಂಸ್ಥೆ ಬೇಂದ್ರೆ ನಗರ ಸಾರಿಗೆ. ಆರಂಭದ ಪರವಾನಗಿ ಒಂದು ಬಿಟ್ಟರೆ ಅಲ್ಲಿಂದ ಇಲ್ಲಿಯವರೆಗೂ ಸರಕಾರದ ದ್ವಂದ್ವ ನೀತಿಗಳ ವಿರುದ್ಧ ಏಳು-ಬೀಳುಗಳನ್ನು ಕಂಡು ಕಾನೂನಾತ್ಮಕ ಹೋರಾಟದಿಂದಲೇ ತನ್ನ ಅಸ್ತಿತ್ವ ಉಳಿಸಿಕೊಂಡು ಮಹಾನಗರ ಜನತೆಗೆ ಉತ್ತಮ ಸಾರಿಗೆ ಸೇವೆ ನೀಡಿದೆ. ಈಗಲೂ ಕರಡು ಅಧಿಸೂಚನೆಯನ್ನು ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿ ಅಲ್ಲಿಂದ ಅನುಮತಿ ಪಡೆದು ಸಂಚಾರ ಮಾಡುತ್ತಿವೆ. ಹು-ಧಾ ನಡುವೆ ಖಾಸಗಿ ಬಸ್‌ಗಳ ಸಂಚರಿಸದಂತೆ ರಾಜ್ಯ ಸರಕಾರ ಅಂತಿಮ ಅಧಿಸೂಚನೆ ಹೊರಡಿಸಿದರೆ ಕಳೆದ 18 ವರ್ಷಗಳಿಂದ ಸಾರಿಗೆ ಸೇವೆ ನೀಡಿದ ಬೇಂದ್ರೆ ಸಾರಿಗೆ ಹಾಗೂ ಸಿಬ್ಬಂದಿಯ ಭವಿಷ್ಯದ ಪ್ರಶ್ನೆ ಉದ್ಭವವಾಗಲಿದೆ.
ಸರಕಾರವೇ ಸುಮಾರು 900 ಕೋಟಿ ರೂ. ಖರ್ಚು ಮಾಡಿ ಉತ್ತಮ ಬಸ್, ರಸ್ತೆ, ನಿಲ್ದಾಣ, ಕಡಿಮೆ ದರದಲ್ಲಿ ಐಷಾರಾಮಿ ವ್ಯವಸ್ಥೆ ಕಲ್ಪಿಸಿದೆ. ಮಿಶ್ರಪಥದಲ್ಲಿ ವಾಯವ್ಯ ಸಾರಿಗೆ ಹಾಗೂ ಬೇಂದ್ರೆ ಸಾರಿಗೆ ಬಸ್ ಓಡಾಡುವುದರಿಂದ ಯೋಜನೆ ಪ್ರಮುಖ ಗುರಿ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವಾಗುವುದಿಲ್ಲ. ಹೀಗಾಗಿ ಬೇಂದ್ರೆ ಸಾರಿಗೆ ಸ್ಥಗಿತಗೊಳಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದೇವೆ. -ರಾಜೇಂದ್ರ ಚೋಳನ್, ವ್ಯವಸ್ಥಾಪಕ ನಿರ್ದೇಶಕ, ಬಿಆರ್‌ಟಿಎಸ್
ಬೇಂದ್ರೆ ನಗರ ಸಾರಿಗೆ ಉದ್ದೇಶ ಲಾಭದಾಯಕವಾಗಿ ನಡೆಸಬೇಕು ಎಂಬುದಲ್ಲ. ನಷ್ಟದಲ್ಲಿ ನಡೆಯುತ್ತಿದ್ದರೂ ಈ ಸಂಸ್ಥೆಯನ್ನೇ ನೆಚ್ಚಿಕೊಂಡಿರುವ ಸಿಬ್ಬಂದಿಗಾಗಿ ಸಂಸ್ಥೆ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮಹಾನಗರದ ಜನತೆಗೆ ಇಷ್ಟೊಂದು ವರ್ಷ
ಉತ್ತಮ ಸಾರಿಗೆ ಸೇವೆ ನೀಡಿದ್ದೇವೆ. ಸಂಸ್ಥೆಯ ಅಸ್ತಿತ್ವಕ್ಕೆ ಧಕ್ಕೆ ಬಾರದಂತೆ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. – ಸುಧಾಕರ ಶೆಟ್ಟಿ, ವ್ಯವಸ್ಥಾಪಕ, ಬೇಂದ್ರೆ ಸಾರಿಗೆ
-ಹೇಮರಡ್ಡಿ ಸೈದಾಪುರ