Advertisement

‘ಬೆಂದ್ರ್ ತೀರ್ಥ ಧಾರ್ಮಿಕ ಕ್ಷೇತ್ರವಾಗಿ ಅಭಿವೃದ್ಧಿ’

03:10 AM Dec 11, 2018 | Karthik A |

ಬೆಟ್ಟಂಪಾಡಿ: ಯತೀ ವಾದಿರಾಜರು ಬೆಂದ್ರ್ ತೀರ್ಥ ಕ್ಷೇತ್ರದ ಉಗಮಕ್ಕೆ ಕಾರಣರು ಎಂಬ ಐತಿಹ್ಯ ಇದೆ. ಬೆಂದ್ರ್ ತೀರ್ಥ ಕ್ಷೇತ್ರವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಅಭಿವೃದ್ಧಿ ಮಾಡಬೇಕು. ಪ್ರವಾಸೋದ್ಯಮವಾಗಿ ಅಭಿವೃದ್ಧಿ ಮಾಡುವ ಆವಶ್ಯಕತೆ ಇಲ್ಲ ಎಂದು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.

Advertisement

ಬೆಂದ್ರ್ ತೀರ್ಥ ಕ್ಷೇತ್ರದ ಹಿಂದಿನ ಪಾವಿತ್ರತೆಯನ್ನು ಉಳಿಸಬೇಕು. ಹಿಂದೆ ಸಂಚಾರಿ ಕ್ರಮದಲ್ಲಿ ವಾದಿರಾಜರು ಈ ಹಾದಿಯಾಗಿ ಬರುವಾಗ ವೃದ್ದರೊಬ್ಬರು ನದಿ ನೀರಿನಲ್ಲಿ ಸ್ನಾನ ಮಾಡುವುದನ್ನು ಕಂಡರು. ಅವರು ವಾದಿರಾಜರ ಬಳಿ ಚಳಿಗೆ ಸ್ನಾನ ಕಷ್ಟ ಎಂದು ತನ್ನ ಆಳಲು ತೋಡಿಕೊಂಡರು. ಆ ಸಂದರ್ಭ ನದಿ ಪಕ್ಕದಲ್ಲೇ ಈಗಿನ ಬೆಂದ್ರ್ ತೀರ್ಥದ ಸ್ಥಳದಲ್ಲಿ ಬಿಸಿನೀರಿನ ಬುಗ್ಗೆಯನ್ನು ಸೃಷ್ಟಿಸಿದರು ಎಂಬ ಐತಿಹ್ಯ ಇದೆ. ಇದರ ಬಗ್ಗೆ ಇಲ್ಲಿನ ಸ್ಥಳೀಯರಿಗೆ ಮಾಹಿತಿ ಇರುವಂತೆ ಕಾಣಿಸುತ್ತಿಲ್ಲ. ಆದರೆ ಉಡುಪಿಯಲ್ಲಿ ಇದರ ಬಗೆಗಿನ ಉಲ್ಲೇಖಗಳು ಸಿಗುತ್ತವೆ. ಆದ್ದರಿಂದ ಈ ಕ್ಷೇತ್ರವನ್ನು ಧಾರ್ಮಿಕ ಹಿನ್ನಲೆಯಲ್ಲಿಯೇ ಅಭಿವೃದ್ಧಿ ಮಾಡಬೇಕಿದೆ ಎಂದು ವಿವರಿಸಿದರು.

ಪುನರುತ್ಥಾನ ಆಗಬೇಕಿದೆ
ಬೆಂದ್ರ್ ತೀರ್ಥಕ್ಕೆ ತನ್ನದೆ ಆದ ಪಾವಿತ್ರತೆ ಇದೆ. ಬಳಿಯಲ್ಲೇ ಇರುವ ಬೈಲಾಡಿ ಶ್ರೀವಿಷ್ಣು ಮೂರ್ತಿ ದೇವಸ್ಥನ ಜತೆ ನಿಕಟ ಸಂಬಂಧ ಇದೆ. ಆದ್ದರಿಂದ ಲಾಡ್ಜ್, ರೇಸಾರ್ಟ್‌ ಮಾಡುವ ಕಾರ್ಯಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದಾಗುವುದು ಬೇಡ. ಪ್ರಾಚೀನದ ಅರ್ಥವನ್ನು ಗಮನಿಸಿಕೊಂಡು ಪುನರುತ್ಥಾನ ಮಾಡಬೇಕಿದೆ. ನಮಗೆ ವೈಭವ ಬೇಡ, ಪಾವಿತ್ರ್ಯತೆ ಉಳಿಸಬೇಕು. ಇದನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ.

ದಕ್ಷಿಣದ ಏಕೈಕ ಸ್ಥಳ
ಕಾಶಿಯಲ್ಲಿ ಬಿಸಿನೀರಿನ ಬುಗ್ಗೆ ಇರುವುದನ್ನು ನೋಡಿದ್ದೇವೆ. ಅದರಂತೆ ದಕ್ಷಿಣ ಭಾರತದಲ್ಲಿ ಇಂತಹದ್ದೇ ಬಿಸಿನೀರಿನ ಬುಗ್ಗೆ ಪುತ್ತೂರಿನ ಇರ್ದೆ ಗ್ರಾಮದ ಬೆಂದ್ರ್ ತೀರ್ಥದಲ್ಲಿ ಮಾತ್ರ ಇದೆ. ಇಷ್ಟು ಪ್ರಾಮುಖ್ಯತೆ ಇರುವ ಧಾರ್ಮಿಕ ಬಿಸಿನೀರಿನ ಬುಗ್ಗೆಯನ್ನು ಸ್ಥಳೀಯರ ಸಹಕಾರದಿಂದ ಅಭಿವ್ರದ್ದಿ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. ಸ್ವಾಮೀಜಿಯ ಜತೆ ಉಡುಪಿ ಮಠದ ಶ್ರೀನಿವಾಸ ತಂತ್ರಿ, ಉದಯ ಕುಮಾರ್‌ ಸರಳತ್ತಾಯ, ಸ್ಥಳೀಯರಾದ ವಿಠ್ಠಲ ರೈ ಬೈಲಾಡಿ, ನಾರಾಯಣ ಭಟ್‌ ಕಾಜಿಮೂಲೆ, ನಾಗಾರಾಜ್‌ ಭಟ್‌, ಕರುಣಾಕರ ಶೆಟ್ಟಿ ಕೊಮ್ಮಂಡ, ದೇವಕಾನ ಸುಬ್ರಹ್ಮಣ್ಯ ಭಟ್‌, ಶ್ರೀಕೃಷ್ಣ ಮಡಕುಳ್ಳಾಯ, ಗ್ರಾ.ಪಂ. ಸದಸ್ಯ ಪ್ರಕಾಶ್‌ ರೈ ಬೈಲಾಡಿ, ಜಗನ್ನಾಥ್‌ ಶೆಟ್ಟಿ ಕೊಮ್ಮಂಡ, ಪ್ರಭಾಕರ ರೈ ಬಾಜುವಳ್ಳಿ, ಬಾಲಕೃಷ್ಣ ಪೂಜಾರಿ ಚೂರಿಪದವು ಉಪಸ್ಥಿತರಿದ್ದರು.

ಜಲತಜ್ಞರ ಭೇಟಿ
ಬೆಂದ್ರ್ ತೀರ್ಥದ ಸಮೀಪ ಹರಿಯುವ ಸೀರೆ ನದಿ ಮತ್ತು ಬಿಸಿನೀರಿನ ಬುಗ್ಗೆಗೆ ಸಂಬಂಧ ಇದೆಯೆ? ಬಿಸಿನೀರಿನ ಕೊಳಲಲ್ಲಿ ನೀರಿನ ಸೆಳೆ ಹೆಚ್ಚುಮಾಡುವುದು ಹೇಗೆ? ಈ ಎಲ್ಲಾ ದೃಷ್ಟಿಕೋನದಿಂದ ಆಲೋಚನೆ ಮಾಡಬೇಕಿದೆ. ಮುಂದಿನ ವಾರ ಬೆಂದ್ರ್ ತೀರ್ಥಕ್ಕೆ ಜಲ ತಜ್ಞರನ್ನು ಕರೆಸಿಕೊಳ್ಳಲಾಗುವುದು. ಸಾಧ್ಯವಾದರೆ ತಾನು ಬರುತ್ತೇನೆ. ಅಭಿವೃದ್ಧಿಯ ಬಗ್ಗೆ ಶಾಸಕರ ಜತೆ ಮಾತುಕತೆ ಮಾಡುವೆ.ಅವರ ಅಲೋಚನೆಯ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದು ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next