ಲಂಡನ್: ಇಂಗ್ಲೆಂಡ್‌ನ ವಿಶ್ವಶ್ರೇಷ್ಠ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ದಿಢೀರನೆ ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿ ಬಿಡುವು ಪಡೆದಿದ್ದಾರೆ. ತನ್ನ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು, ತೋರು ಬೆರಳಿನ ಗಾಯಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಈ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ. ಇಂಗ್ಲೆಂಡ್ ಮತ್ತು ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿದೆ.
ಆ.4ರಿಂದ ಭಾರತ ವಿರುದ್ಧ ತನ್ನದೇ ನೆಲದಲ್ಲಿ ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇಂತಹ ಹೊತ್ತಿನಲ್ಲಿ ಬೆನ್ ಸ್ಟೋಕ್ಸ್ ತೆಗೆದುಕೊಂಡಿರುವ ಈ ನಿರ್ಧಾರ, ಇಂಗ್ಲೆಂಡ್ ಗೆ ಆಘಾತ ಮೂಡಿಸಿದೆ.
ಇದನ್ನೂ ಓದಿ:ಬಿಲ್ಗಾರಿಕೆ: ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಸೋಲನುಭವಿಸಿದ ಅತನು ದಾಸ್
ಈ ವರ್ಷ ಭಾರತದಲ್ಲಿ ನಡೆದ ಐಪಿಎಲ್ ಮೊದಲ ಭಾಗದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವಾಗ ಸ್ಟೋಕ್ಸ್ ತಮ್ಮ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಕೆಲ ದಿನಗಳ ಹಿಂದೆ ಪಾಕಿಸ್ಥಾನ ವಿರುದ್ಧದ ಏಕದಿನ ಸರಣಿಯಲ್ಲಿ ಬೆನ್ ಸ್ಟೋಕ್ಸ್ ತಂಡವನ್ನು ಮುನ್ನಡೆಸಿದ್ದರು.
ಈ ಹಿಂದೆ ಆಸ್ಟ್ರೇಲಿಯದ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡಾ ಇಂತಹದ್ದೇ ನಿರ್ಧಾರ ಮಾಡಿ ಸುದ್ದಿಯಾಗಿದ್ದರು. ಕೆಲವು ತಿಂಗಳ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಅವರು ಮರಳಿದ್ದರು. ಎರಡು ದಿನಗಳ ಹಿಂದೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅಮೇರಿಕದ ಜಿಮ್ನಾಸ್ಟಿಕ್ ಪಟು ಸಿಮೋನ್ ಬೈಲ್ಸ್ ಕೂಡಾ ಮಾನಸಿಕ ಆರೋಗ್ಯ ಸುಧಾರಣೆಯ ಕಾರಣ ನೀಡಿ ಕೂಟದಿಂದ ಹೊರಬಂದಿದ್ದರು.