Advertisement

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

01:43 PM Sep 20, 2024 | Team Udayavani |

ಕುಂದಾಪುರ: ಬೆಳ್ವೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತುರ್ತಾಗಿ 108 ಆ್ಯಂಬುಲೆನ್ಸ್‌ ಬೇಕಾಗಿದೆ. ಬಹುತೇಕ ಗ್ರಾಮೀಣ ಪ್ರದೇಶ ಗಳನ್ನೇ ಹೊಂದಿರುವ ಈ ಆಸ್ಪತ್ರೆಯ ವ್ಯಾಪ್ತಿ ಯಲ್ಲಿ ಅನಾರೋಗ್ಯ ಪೀಡಿತರನ್ನು, ಗರ್ಭಿಣಿಯರನ್ನು, ಯಾರಿಗಾದರೂ ಅಪಘಾತ ಉಂಟಾದರೆ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲು ಜನ ಪರದಾಡುವಂತಾಗಿದೆ. ದಶಕಗಳಿಂ ದಲೂ ಆ್ಯಂಬುಲೆನ್ಸ್‌ ಬೇಡಿಕೆಯಿದ್ದು, ಇನ್ನೂ ಬೇಡಿಕೆ ಈಡೇರಿಲ್ಲ.

Advertisement

ಇಲ್ಲಿನ ಜನ ಸುಮಾರು ವರ್ಷಗಳಿಂದ ಆ್ಯಂಬುಲೆನ್ಸ್‌ಗಾಗಿ ಬೇಡಿಕೆ ಇಡುತ್ತಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸದ ಆರೋಗ್ಯ ಇಲಾಖೆಯು ಮೌನ ವಹಿಸಿದೆ. ಇಲಾಖೆಯ ಈ ಮೌನ ಹಳ್ಳಿ ಜನರ ಜೀವ ಹಿಂಡುತ್ತಿದೆ. ಸಕಾಲದಲ್ಲಿ ಆ್ಯಂಬುಲೆನ್ಸ್‌ ಸಿಗದೇ, ಜನರು ತೊಂದರೆ ಪಟ್ಟ ನಿದರ್ಶನಗಳು ಅನೇಕ.

5 ಗ್ರಾಮಗಳು: 14 ಸಾವಿರ ಜನಸಂಖ್ಯೆ
ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬೆಳ್ವೆ, ಹೆಂಗವಳ್ಳಿ, ಅಲಾºಡಿ, ಮಡಾಮಕ್ಕಿ ಹಾಗೂ ಶೇಡಿಮನೆ ಈ 5 ಗ್ರಾಮಗಳು ಬರುತ್ತವೆ. ಅಂದಾಜು 14 ಸಾವಿರ ಜನಸಂಖ್ಯೆಯಿದೆ.

ಬೇರೆ ಕಡೆಯ ಆ್ಯಂಬುಲೆನ್ಸ್‌ ಅವಲಂಬನೆ
ಐದು ಗ್ರಾಮಗಳ ಆರ್ಡಿ, ಅರಸಮ್ಮಕಾನು, ಯಡಮಲ್ಲಿ, ಕಬ್ಬಿನಾಲೆ, ಹಂಜಾ, ಕೊಂಜಾಡಿ, ತೊಂಬತ್ತು ಮತ್ತಿತರ ಹತ್ತಾರು ಊರುಗಳ ಜನ ಅನಾರೋಗ್ಯ ಉಂಟಾದರೆ, ವೃದ್ಧರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ದೂರದ ಹೆಬ್ರಿ ಅಥವಾ ಹಾಲಾಡಿ ಆಸ್ಪತ್ರೆ ಗಳಿಂದ ಆ್ಯಂಬುಲೆನ್ಸ್‌ ಬರ ಬೇಕಾಗಿದೆ. ಅದು ಬೇರೆ ಕಡೆ ಹೋಗಿದ್ದರೆ, ಹಿರಿಯಡ್ಕ, ಕಾರ್ಕಳ ಅಥವಾ ಕುಂದಾಪುರದಿಂದ ಬರಬೇಕು. ಹಾಲಾಡಿ, ಹೆಬ್ರಿಯಿಂದ ಬಂದರೂ ಏನಿಲ್ಲ ವೆಂದರೂ ಕನಿಷ್ಠ ಹೋಗಲು 20-25 ಕಿ.ಮೀ., ವಾಪಾಸು ಬರಲು 20-25 ಕಿ.ಮೀ., ಒಟ್ಟಾರೆ 50 ಕಿ.ಮೀ. ಸಂಚರಿಸಬೇಕಾಗಿರುತ್ತದೆ. ಹಳ್ಳಿಗಾಡಿನ ರಸ್ತೆಗಳಲ್ಲಿ ಇನ್ನಷ್ಟು ವಿಳಂಬವಾಗಿ ಸಂಚರಿಸಬೇಕಾಗಿರುವುದರಿಂದ ರೋಗಿ ಯನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಗಂಟೆಗಟ್ಟಲೆ ಸಮಯ ವ್ಯಯವಾಗು ತ್ತದೆ. ಅನೇಕ ಬಾರಿ ಸಕಾಲದಲ್ಲಿ ಆ್ಯಂಬುಲೆನ್ಸ್‌ ಸಿಗದೇ ಸಾವನ್ನಪ್ಪಿದ ನಿದರ್ಶನಗಳು ಸಾಕಷ್ಟಿವೆ.

ಪ್ರಸ್ತಾವನೆ ಸಲ್ಲಿಕೆ
ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ 108 ಆ್ಯಂಬುಲೆನ್ಸ್‌ ವಾಹನಗಳು ಬೇಕು ಎನ್ನುವುದಾಗಿ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುಂದಾಪುರ ಆಸ್ಪತ್ರೆಗೊಂದು ಸುಸಜ್ಜಿತ ಆ್ಯಂಬುಲೆನ್ಸ್‌ , ಉಡುಪಿಗೆ ಹೆಚ್ಚುವರಿ ಆ್ಯಂಬುಲೆನ್ಸ್‌ , ಇನ್ನು 3 ಗ್ರಾಮೀಣ ಪ್ರದೇಶಗಳಿಗೂ ಬೇಡಿಕೆ ಸಲ್ಲಿಸಿದ್ದೇವೆ. ಬೆಳ್ವೆಗೂ ಬೇಡಿಕೆ ಇರುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದು ಸರಕಾರದ ಮಟ್ಟದಲ್ಲಿ ಆಗಬೇಕಾಗಿದೆ.
-ಡಾ| ಐ.ಪಿ. ಗಡಾದ್‌, ಜಿಲ್ಲಾ ಆರೋಗ್ಯಧಿಕಾರಿ

Advertisement

ಹಲವು ವರ್ಷಗಳಿಂದ ಮನವಿ
ಬೆಳ್ವೆ ಆಸ್ಪತ್ರೆಗೆ 108 ಆ್ಯಂಬುಲೆನ್ಸ್‌ ಬೇಕು ಅನ್ನುವುದಾಗಿ ನಿರಂತರ ಬೇಡಿಕೆ ಸಲ್ಲಿಸುತ್ತಿದ್ದು, ಗ್ರಾ.ಪಂ.ಗಳಿಂದಲೂ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಈ ಬಗ್ಗೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೋರಿದೆ. ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆ್ಯಂಬುಲೆನ್ಸ್‌ ಸೇವೆಗೆ ಸಿಗದೇ, ಪರದಾಡುವಂತಾಗಿದೆ. ಇನ್ನಾದರೂ ಆರೋಗ್ಯ ಇಲಾಖೆಯವರು ಎಚ್ಚೆತ್ತುಕೊಂಡು ತುರ್ತಾಗಿ ಆ್ಯಂಬುಲೆನ್ಸ್‌ ಸೇವೆಯನ್ನು ಒದಗಿಸಲಿ.
– ಪ್ರತಾಪ್‌ ಶೆಟ್ಟಿ ಎ.ಆರ್‌., ಮಡಾಮಕ್ಕಿ ಗ್ರಾ.ಪಂ. ಸದಸ್ಯ.

ಜನರ ಗೋಳು ತಪ್ಪಿದ್ದಲ್ಲ…
ಕಿ.ಮೀ. ಗಟ್ಟಲೆ ದೂರದಿಂದ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ, ಹೃದಯಾಘಾತ ಉಂಟಾದರೆ, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಜನರು ಪಡುವ ಪಾಡು ಅಷ್ಟಿಷ್ಟಲ್ಲ. ಅದು ಅನುಭವಿಸಿದವರಿಗೆ ಗೊತ್ತು. ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್‌ ಸಿಕ್ಕಿ, ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸುತ್ತಿದ್ದರೆ, ಬದುಕಿಸಬಹುದಿತ್ತು ಅನ್ನುವ ಕುಟುಂಬಗಳು ಅನೇಕ ಇವೆ. ಈಗಲಾದರೂ ಗ್ರಾಮೀಣ ಪ್ರದೇಶದ ನೆಲೆಯಲ್ಲಿ ಇಲ್ಲಿನ ಜನರ ಬೇಡಿಕೆಗೆ ಸ್ಪಂದಿಸಿ, ಆರೋಗ್ಯ ಇಲಾಖೆಯು ತ್ವರಿತಗತಿಯಲ್ಲಿ ಆ್ಯಂಬುಲೆನ್ಸ್‌ ನೀಡಿ, ಜೀವ ಉಳಿಸುವ ಕಾರ್ಯ ಮಾಡಲಿ ಎನ್ನುವುದು ಇಲ್ಲಿನ ಜನರ ಒತ್ತಾಯವಾಗಿದೆ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next