Advertisement

ಬ್ರಿಟಿಷರ ಕಾಲದಿಂದಲೂ ಗೌರಮ್ಮನ ಪೂಜೆ: ಜಾತಿ ಭೇದವಿಲ್ಲದೆ ಸರ್ವರೂ ಆರಾಧಿಸುತ್ತಾರೆ

08:25 PM Aug 31, 2022 | Team Udayavani |

ಬೇಲೂರು: ಸಾರ್ವಜನಿಕ ಗಣಪತಿ ಮತ್ತು ಸ್ವರ್ಣ ಗೌರಿಯನ್ನು ಪ್ರತಿಷ್ಠಾಪಿಸಿ ಆರಾಧಿಸಿ ಮೆರವಣಿಗೆ ಮಾಡುವುದನ್ನು ಕಂಡಿದ್ದೇವೆ. ಆದರೆ ಇಲ್ಲಿ ಜಾತಿ ಭೇದವಿಲ್ಲದೆ ಸರ್ವರೂ ಪೂಜಿಸಿ ಆರಾಧಿಸುವ ಬ್ರಿಟಿಷರ ಕಾಲದಿಂದಲೂ ಆಚರಸಿಕೊಂಡು ಬಂದಿರುವ ಸರ್ಕಾರಿ ಗೌರಮ್ಮ ದೇವಿಯ ಪೂಜಾ ಪದ್ಧತಿ ವಿಶಿಷ್ಟತೆ ಪಡೆದುಕೊಂಡಿದೆ.

Advertisement

ಪಟ್ಟಣದ ಕೋಟೆ ರಾಮರಾಯರ ಬೀದಿಯಲ್ಲಿನ ಭಾರ್ಗವ ಎಂಬುವರ ನಿವಾಸದಲ್ಲಿ ಉಯ್ನಾಲೆ ಗೌರಮ್ಮ ಕಾಣಸಿಗುತ್ತಾಳೆ. ಮೇಲ್ವರ್ಗದವರ ಮನೆಯಲ್ಲಿ ಪೂಜಿ ಸಲಾಗುತ್ತಿದ್ದ ಗೌರಮ್ಮನ ಪೂಜೆ ಮಾಡಲು ಎಲ್ಲ ಕುಟುಂಬದವರಿಗೂ ಪೂಜೆ ನೆರವೇರಿಸಲು ತೊಂದರೆಯಿತ್ತು. ಆದರಿಂದ ಪಟ್ಟಣದ ಹಿರಿಯರೆಲ್ಲರೂ ಸೇರಿ ಸಾರ್ವಜನಿಕ ಸರ್ಕಾರಿ ಗೌರಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದಾಗಿ ನಿರ್ಧರಿಸಿದರು. 250 ವರ್ಷಗಳ ಹಿಂದೆಯೇ ಜಾತ್ಯಾತೀತವಾಗಿ ಸ್ವರ್ಣಗೌರಿ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಗೌರಿಗೆ ವಿಶೇಷ ಅಲಂಕಾರ: ಇಲ್ಲೊಂದು ವಿಶೇಷತೆ ಇದೆ. ಈ ಗೌರಮ್ಮ ಮರಳಿನ ಗೌರಮ್ಮ, ಪಟ್ಟಣದ ವಿಷ್ಣು ಸಮುದ್ರ ಕೆರೆಗೆ ಹಬ್ಬದ ದಿನ ಬೆಳಗಿನ ಜಾವ 5 ಗಂಟೆಗೆ ತೆರಳಿ ಮರಳು ಮತ್ತು ಗಂಗೆಯನ್ನು ತಂದು ಅರಸಿನ, ಮೈದಾ, ಹಾಲು, ನೀರುಗಳ ಸೇರಿಸಿ ಗೌರಮ್ಮನ ಮುಖಮಾಡಿ ಅಭಯ ವರದ ಹಸ್ತಗಳ ಅಳವಡಿಸಿ, ಉಯ್ನಾಲೆಯಲ್ಲಿ ಏಳು ಹೆಡೆಯ ನಾಗಪೀಠದ ಮೇಲೆ ಸ್ಥಾಪಿಸು ತ್ತಾರೆ. ಇದರ ಜತೆ ಅಲಂಕಾರಿಕ ಗೌರಮ್ಮನನ್ನು ಇಟ್ಟು ಪೂಜಿಸಲಾಗುತ್ತದೆ.

ಪೂಜೆಗೆ ಸಹಕಾರ: ಈ ಪುಟ್ಟ ಮಡಿಲು ಗಣಪನನ್ನು ಜೋಪಾನವಾಗಿಟ್ಟು ಪ್ರತಿವರ್ಷ ಇದನ್ನೆ ಬಳಸಲಾಗು ವುದು ಮತ್ತೂಂದು ಇಲ್ಲಿನ ವಿಶೇಷ. ಈ ಸರಕಾರಿ ಗೌರಮ್ಮನಿಗೆ ಇದ್ದ ಇನಾಮು ಭೂಮಿ ಈಗಿಲ್ಲ. ಇಲ್ಲಿನ ಚನ್ನಕೇಶವ ದೇವಾಲಯದಿಂದಲೂ ಸಹಕಾರ ದೊರಕುತ್ತಿದೆ. 1921ರಲ್ಲಿ ರಚಿತವಾದ ನಿಯಮಾವಳಿ ಪ್ರಕಾರ ದೊಡ್ಡಪಲ್ಲಕ್ಕಿ, ದೇವರಛತ್ರಿ, ನವಿಲುಗರಿ, ಚಾಮರ, ಬೆಳ್ಳಿ ದೀವಟಿಗೆಗಳು ಮತ್ತು ವಾದ್ಯಗಳ ಸಹಕಾರ ನೀಡಲಾಗುತ್ತದೆ. ಮೆರವಣಿಗೆ, ಮಂಗಳವಾದ್ಯ, ಪಲ್ಲಕ್ಕಿ ಸಮೇತ ಗೌರಮ್ಮಳನ್ನು ವಿಷ್ಣು ಸಮುದ್ರ ಕೆರೆಯಲ್ಲಿ ಅದ್ಧೂರಿಯಾಗಿ ಕುಟುಂಬ ಸದಸ್ಯರು ಹಾಗೂ ಭಕ್ತರ ಸಹಕಾರದಿಂದ ವಿಸರ್ಜನೆ ಮಾಡುತ್ತಾರೆ.

ಲಭ್ಯ ಮಾಹಿತಿ ಪ್ರಕಾರ ಗೌರಮ್ಮ ದೇವಿಯನ್ನು ಕೃಷ್ಣ ಜೋಯಿಸರು ಪೂಜಿಸುತ್ತಿದ್ದರೆಂಬ ಮಾಹಿತಿಯಿದೆ. ಇವರ ನಂತರ 3 ತಲೆಮಾರು ಕಳೆದು ಇದೀಗ ಅವರ ವಂಶಸ್ಥ ಭಾರ್ಗವ ಜಯಶೀಲ ದಂಪತಿ ಪೂಜಾವಿಧಿಗಳ ನಡೆಸಿಕೊಂಡು ಬರುತ್ತಿದ್ದಾರೆ.

Advertisement

ಧಾರ್ಮಿಕ ಆಚರಣೆಗೆ ತಸ್ತಿಕ್‌ ಅನುದಾನ ಮೀಸಲು: ಗೌರಮ್ಮ ಪೂಜೆ ಪ್ರತಿವರ್ಷ ಸಾಂಗೋಪವಾಗಿ ನಡೆದುಕೊಂಡು ಬರುತ್ತಿದೆ. ಗೌರಿಹಬ್ಬದ ದಿನದ ಗ್ರಹಗತಿಯಂತೆ 3 ಇಲ್ಲವೇ 7 ದಿನ ಪೂಜಿಸಿ ನೀರಿಗೆ ಬಿಡುವ ಪದ್ಧತಿಯಿದೆ. ಹೊಯ್ಸಳ ಸಾಮ್ರಾಜ್ಯ ಅವಧಿಯಲ್ಲಿ ಈ ಗೌರಮ್ಮನ ಉಯ್ನಾಲೆ ಬಾಗಿನಕ್ಕಾಗಿ ಮೂಲಧನ ಸಮರ್ಪಣೆಯಿತ್ತು. ಬ್ರಿಟಿಷ್‌ ಆಡಳಿತ ಅವಧಿಯಲ್ಲಿ ಇದು ಮುಂದುವರಿದಿತು. ಇದೀಗ ಮುಜರಾಯಿ ಇಲಾಖೆ ಒಡೆತನದಲ್ಲಿ ಈ ಗೌರಮ್ಮನನ್ನು ದೇವಾಲಯಗಳ ವರ್ಗಕ್ಕೆ ಸೇರಿಸಿ ತಸ್ತಿಕ್‌ ಮೊಬಲಗನ್ನು ನೀಡುತ್ತಿರುವುದು ವಿಶೇಷ.

ಮಡಿಲು ಗಣೇಪನ ವಿಶೇಷ : ಗೌರಮ್ಮನ ವಿಸರ್ಜನೆಗೆ ಮುನ್ನ ಗೌರಿಯ ಕೈಗೆ ತಾಂಬೂಲವಿಟ್ಟು ಗೌರಿಯ ಮಡಿಲಲ್ಲಿ ಚಿಕ್ಕದಾದ ಗಣೇಶಮೂರ್ತಿ ಇರಿಸಿ ಪೂಜಿಸಲಾಗುತ್ತದೆ. ಈ ಪುಟ್ಟ ಗಣಪತಿ ಮೂರ್ತಿಯನ್ನು 40 ವರ್ಷಗಳ ಹಿಂದೆ ಕಾಗದ ಮತ್ತು ಮೆಂತ್ಯ ಮಿಶ್ರಣಮಾಡಿ ಮಾಡಲಾಗಿದ್ದು ಇದನ್ನು ಮಡಿ ಲುಗಣೇಶ, ಸಂತಾನಗಣೇಶ, ಬಾಲಗಣೇಶ ಎಂದು ಕರೆಯುತ್ತಾರೆ. ಸಂತಾನ ಅಪೇಕ್ಷೆಯ ಮಹಿಳೆಯರು ಮಣೆ ಮೇಲೆ ಕುಳಿತು ಈ ಪುಟ್ಟ ಗಣಪತಿ ಸಹಿತ ಗೌರಮ್ಮನನ್ನು ಪೂಜಿಸಬೇಕು. ನಂತರ ಮಡಿಲ ಗಣಪನನ್ನು ಪೂಜಿಸಿದವರ ಮಡಿಲಿಗೆ ಇಡಲಾಗುತ್ತದೆ. ಇದನ್ನು ಇಟ್ಟುಕೊಂಡೇ ಗೌರಮ್ಮನಿಗೆ ಮಡಲಕ್ಕಿ (ಸೋಗಲಕ್ಕಿ) ಕಟ್ಟುತ್ತಾರೆ. ಇದರಿಂದ ಸಂತಾನಪ್ರಾಪ್ತಿಯಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next