Advertisement

ವಲಸೆ ಬಂದವರಿಂದಲೇ ಹಲ್ಲೆಯಂತ ನೀಚ ಕೆಲಸ ; ಬೇಳೂರು ವ್ಯಂಗ್ಯ

07:59 PM Mar 29, 2022 | Team Udayavani |

ಸಾಗರ: ಬೇರೆ ಕ್ಷೇತ್ರದಿಂದ ವಲಸೆ ಬಂದಂತಹವರಿಂದಲೇ ಎಂಡಿಎಫ್ ಶಿಕ್ಷಣ ಸಂಸ್ಥೆಯಲ್ಲಿ ನಡೆದಂತಹ ಹಲ್ಲೆಯಂತಹ ನೀಚ ಕೆಲಸ ಮಾಡುತ್ತಾರೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಶಾಸಕ ಎಚ್.ಹಾಲಪ್ಪ ಹರತಾಳು ವಿರುದ್ಧ ಪರೋಕ್ಷ ಟೀಕೆ ಮಾಡಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಹಾಲಪ್ಪ ಅವರದ್ದು ಹಿಟ್ಲರ್ ಮಾದರಿ ಆಡಳಿತ. ಗೂಂಡಾಗಿರಿ ಮೂಲಕ ಗಲಾಟೆ ಮಾಡಿಸಿ ಪ್ರತಿಷ್ಠಿತ ಸಂಸ್ಥೆಗಳ ನಿಯಂತ್ರಣ ಪಡೆಯುವ ಹುನ್ನಾರ ಹಾಲಪ್ಪ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಂಸ್ಥೆಯಲ್ಲಿ ನಡೆದ ಭ್ರಷ್ಟಾಚಾರ, ಆಡಳಿತದ ವ್ಯತ್ಯಯಗಳ ಸಂಬಂಧ ಸರ್ಕಾರ, ಶಾಸಕರು ಸೂಕ್ತ ತನಿಖೆ ಮಾಡಿಸಬಹುದಿತ್ತು. ಆದರೆ ಶಾಸಕರು ವಿಧಾನಸಭಾ ಕಲಾಪವನ್ನು ಬಿಟ್ಟು ಎಂಡಿಎಫ್ ಬಗ್ಗೆ ಆಸಕ್ತಿ ತೋರಿರುವುದು ಪ್ರಶ್ನಾರ್ಹ. ಶಿಮುಲ್‌ನಂತಹ ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷರು ಹಾಗೂ ಇಲ್ಲಿ ಉಪಾಧ್ಯಕ್ಷರಾಗಿರುವ ಶ್ರೀಪಾದ ಹೆಗಡೆ ಅವರಿಗೆ ಹೆಂಡತಿ, ಮಕ್ಕಳ ಎದುರಿನಲ್ಲಿಯೇ ಹಲ್ಲೆ ನಡೆಸಲಾಗಿದೆ. ಇದು ಒಂದು ರೀತಿಯಲ್ಲಿ ಎರಡು ಸಮುದಾಯದ ನಾಯಕರ ಎದೆಯ ಮೇಲೆ ಕಾಲಿಟ್ಟಂತಾಗಿದೆ ಎಂದು ಬೇಳೂರು ಪ್ರತಿಪಾದಿಸಿದರು.

ಹಲ್ಲೆಯ ಹಿಂದೆ ಓಸಿ ದಂಧೆಯವರು, ಗೂಂಡಾಗಳು ಪಾಲ್ಗೊಂಡಿದ್ದಾರೆ. ಇಲ್ಲಿನ ಅಷ್ಟೂ ಘಟನೆಗಳ ವಿಡಿಯೋ ಕ್ಲಿಪ್ಪಿಂಗ್ ಇದೆ. ಆಡಳಿತ ಪಕ್ಷದ ಶಾಸಕರ ಎದುರಿನಲ್ಲಿ ಅವರದೇ ಪಕ್ಷದ ಮುಖಂಡರ ಮೇಲೆ ಹಲ್ಲೆ ಆಗಿದೆ. ಈ ಹಿಂದೆ ಕಾರ್ಯಕರ್ತರ ಮೇಲೆ ಹಲ್ಲೆ ಆದ ನಂತರ ದೂರು ದಾಖಲಾಗಿಲ್ಲ ಎಂಬ ಕಾರಣಕ್ಕೆ ಆಡಳಿತ ಪಕ್ಷದ ಶಾಸಕರಾಗಿಯೇ ಚಕ್ಕಳಮಕ್ಕಳ ಹಾಕಿ ಠಾಣೆಯಲ್ಲಿ ಸತ್ಯಾಗ್ರಹ ಮಾಡಿದವರು ಮೌನವಾಗಿರುವ ಕಾರಣವಾದರೂ ಏನು? ಜನಪ್ರತಿನಿಧಿಗಳ ಚೇಲಾ ಆಗಿ ಎಎಸ್‌ಪಿ ಇನ್ನಿತರ ಪೊಲೀಸ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಸಿಗಂದೂರಿನಲ್ಲಿ, ಮಾರಿಕಾಂಬಾ ಸಮಿತಿಯಲ್ಲಿ ಪಾಲು ಕೇಳಿದ ಹಾಲಪ್ಪ ಎಂಡಿಎಫ್‌ನಲ್ಲೂ ಅಧಿಕಾರ ಪಡೆದುಕೊಳ್ಳುವ ಸಂಚಿನ ಭಾಗವಾಗಿಯೇ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.

ಇದನ್ನೂ ಓದಿ : ಪಿರಿಯಾಪಟ್ಟಣ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Advertisement

ಈತನಕ ಘಟನೆಗೆ ಸಂಬಂಧಪಟ್ಟಂತೆ ದೂರು ನೀಡಿದ್ದರೂ ಎಫ್‌ಐಆರ್ ದಾಖಲು ಮಾಡಿಲ್ಲ. ಗಲಾಟೆಗೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳು ನನ್ನ ಬಳಿ ಇದ್ದು ಅದನ್ನು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಡಿ.ಕೆ.ಹರಿಪ್ರಸಾದ್ ಅವರಿಗೆ ನೀಡಿ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.

ಈಗಾಗಲೇ ಇಂದಿರಾಗಾಂಧಿ ಕಾಲೇಜು ಎದುರು ಎಪಿಎಂಸಿ ವತಿಯಿಂದ ಸುಸಜ್ಜಿತ ಸಂತೆ ಮಾರುಕಟ್ಟೆ ನಿರ್ಮಿಸಿ, ಅದನ್ನು ನಗರಸಭೆಗೆ ಹಸ್ತಾಂತರ ಮಾಡಲಾಗಿದೆ. ಸಂತೆಗಾಗಿ ಸಜ್ಜುಗೊಳಿಸಿದ ಜಾಗವನ್ನು ಶಾಸಕ ಹಾಲಪ್ಪ ತಮ್ಮ ಮಕ್ಕಳ ಮದುವೆಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ತಮ್ಮ ಇಬ್ಬರು ಮಕ್ಕಳ ಮದುವೆಯ ಆರತಕ್ಷತೆ ಕಾರ್ಯವನ್ನು ಇಲ್ಲಿ ಮಾಡಿದ್ದಾರೆ. ಆದರೆ ಸಾಗರದ ಜನರು ಸಂತೆ ಇಲ್ಲದೆ ಅಲ್ಲಲ್ಲಿ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಸಂತೆ ಮೈದಾನ ನಿರ್ಮಿಸಿದ್ದು ಶಾಸಕರ ಮಕ್ಕಳ ಮದುವೆಗೆ ಮಾತ್ರವೇ ಎನ್ನುವುದನ್ನು ಶಾಸಕ ಹಾಲಪ್ಪ ಸಾಗರದ ಜನರಿಗೆ ಸ್ಪಷ್ಟಪಡಿಸಬೇಕು. ಗಣಪತಿ ಕೆರೆ ಒತ್ತುವರಿ ಬಗ್ಗೆ ಸ್ವತಃ ಪರಿವಾರದ ಪ್ರಮುಖರಾದ ಡಾ. ಪ್ರಭಾಕರಭಟ್ ಕಲ್ಲಡ್ಕ ಶಾಸಕರ ವೈಫಲ್ಯವನ್ನು ಎತ್ತಿ ಹೇಳಿದ್ದಾರೆ. ಕೆರೆ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಕೆರೆ ಅಭಿವೃದ್ಧಿ ಹಣ ತಿಂದ ಹಾಲಪ್ಪ ಯಾವತ್ತೂ ಉದ್ಧಾರವಾಗುವುದಿಲ್ಲ. ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಈತನಕ ಹಾಲಪ್ಪ ಅವರು ಎರಡು ಪ್ರಮುಖ ಜನಾಂಗದ ಮುಖಂಡರ ಮೇಲೆ ಹಲ್ಲೆ ಮಾಡಿದ್ದರೂ ಕ್ರಮ ಕೈಗೊಳ್ಳದೆ ಇರುವುದು ದುರದೃಷ್ಟಕರ ಸಂಗತಿ. ತಕ್ಷಣ ಪೊಲೀಸ್ ಇಲಾಖೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಸೋಮಶೇಖರ್ ಲ್ಯಾವಿಗೆರೆ, ಪ್ರಮುಖರಾದ ತಾರಾಮೂರ್ತಿ, ಗಣಪತಿ ಮಂಡಗಳಲೆ, ಯಶವಂತ ಪಣಿ, ನಾರಾಯಣಪ್ಪ, ಅನ್ವರ್ ಭಾಷಾ, ಸಂತೋಷ್, ವೆಂಕಟೇಶ್ ಗಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next