ಹಾಸನ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬೇಲೂರು ಕಾಂಗ್ರೆಸ್ ಶಾಸಕ ವೈ.ಎನ್.ರುದ್ರೇಶಗೌಡ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.ಅವರಿಗೆ 57 ವರ್ಷ ಪ್ರಾಯವಾಗಿತ್ತು.
ರುದ್ರೇಶಗೌಡ ಅವರು ಕೆಲವು ವರ್ಷಗಳಿಂದಲೂ ನರರೋಗದಿಂದ ಬಳಲುತ್ತಿದ್ದರು. ಶುಕ್ರವಾರ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾವಣೆಗಾಗಿ ಬೆಂಗಳೂರಿಗೆ ಆಗಮಿಸಿದ್ದ ಅವರ ತೀವ್ರ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಮತ ಚಲಾವಣೆ ಮಾಡಲೂ ಸಾಧ್ಯವಾಗಿರಲಿಲ್ಲ.
ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ಚಿಂತಾಜನಕ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ವಿದೇಶಕ್ಕೂ ತೆರಳಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು.
ಜೆಡಿಎಸ್ನಿಂದ ರಾಜಕೀಯ ಜೀವನ ಆರಂಭಿಸಿದ್ದ ರುದ್ರೇಶಗೌಡ ಅವರು ಒಂದು ಬಾರಿ ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2004 ರಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದ ಅವರು 2008 ಮತ್ತು 2013 ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು.