Advertisement

ಎರಡೇ ವಾರಗಳಲ್ಲಿ 36 ಕಾರ್ಯಾಚರಣೆ; ಕಳಬಟ್ಟಿ  ಪತ್ತೆ

12:05 PM Mar 27, 2019 | Naveen |
ಬೆಳ್ತಂಗಡಿ : ಚುನಾವಣೆ ಹಿನ್ನೆಲೆಯಲ್ಲಿ ಎರಡೇ ವಾರಗಳಲ್ಲಿ 36 ಕಡೆ ತಾಲೂಕು ಅಬಕಾರಿ ಇಲಾಖೆ ಮಿಂಚಿನ ಕಾರ್ಯಾಚರಣೆ ನಡೆಸಿದೆ.
2018ರ ಮಾ. 10ರಂದು ಲೋಕಸಭಾ ಚುನಾವಣೆ ನೀತಿಸಂಹಿತೆ ಘೋಷಣೆ ಬಳಿಕ ಹೊಟೇಲ್‌, ಮನೆ ಹಾಗೂ ಇತರ ಕಡೆ ದಾಳಿ ನಡೆಸಿದೆ. ಈವರೆಗೆ ಮೂರು ಘೋರ ಪ್ರಕರಣಗಳು ದಾಖಲಾಗಿವೆ. ಘೋರ ಪ್ರಕರಣದಲ್ಲಿ ಅಕ್ರಮ ಎಂದು ಸಾಬೀತಾದವರ ಮೇಲೆ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಯಾಗಿಸಲಾಗುವುದು. 6 ಇತರ ಪ್ರಕರಣಗಳು ದಾಖಲಾಗಿವೆ. ಸಾಮಾನ್ಯ ಪ್ರಕರಣದ 6 ಮಂದಿಯನ್ನು ಠಾಣೆಯಲ್ಲಿ ಇತ್ಯರ್ಥಗೊಳಿಸಿ ಬಿಡುಗಡೆ ಮಾಡಲಾಗಿದೆ, 3 ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಶಿಕ್ಷೆ ವಿಧಿಸಲಾಗಿದೆ.
ತಾಲೂಕಿನ ವಿವಿಧೆಡೆ ಎರಡು ವಾರಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ 7.790 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದ್ದು, 110 ಲೀ. ಕೊಳೆ (ವೇಸ್ಟೇಜ್‌) ವಶಪಡಿಸಿ ನಾಶಮಾಡಲಾಗಿದೆ. ಇನ್ನುಳಿದಂತೆ 350 ಎಂಎಲ್‌ ಕಳ್ಳಬಟ್ಟಿ ವಶಪಡಿಸಿಕೊಂಡು ನಾಶಮಾಡಲಾಗಿದ್ದು, ಒಟ್ಟು 3,790 ರೂ. ಮೌಲ್ಯದ ಮದ್ಯ, ಕೊಳೆ ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣೆ ಘೋಷಣೆ ಎರಡು ದಿನ ಹಿಂದೆ ಮಾ. 8 ರಂದು 4.590 ಲೀ. ಮದ್ಯ ಹಾಗೂ 2.640 ಬಿಯರ್‌ ಮಾರಾಟ ಮಾಡಲು ಯತ್ನಿಸಿದ್ದನ್ನು ಪತ್ತೆಹಚ್ಚಲಾಗಿತ್ತು.
 ಕಳ್ಳಬಟ್ಟಿ ಸಾರಾಯಿ ಪತ್ತೆ
ಮಾ. 11ರಂದು ಕೊಕ್ಕಡದಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಸಲು ಗೇರುಹಣ್ಣು ಕೊಳೆ ದಾಸ್ತಾನು ಮಾಡಿರುವುದು ಪತ್ತೆಯಾಗಿತ್ತು. ಸುಮಾರು 50 ಲೀ. ಕೊಳೆ ಹಾಗೂ 0.350 ಲೀ. ಕಳ್ಳಬಟ್ಟಿ ಸಾರಾಯಿ ವಶಪಡಿಸಿ ನಾಶಪಡಿಸಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ  33 ಕಾರ್ಯಾಚರಣೆ
2018ರ ಮಾ. 27ರಿಂದ ಮೇ 18 ಚುನಾವಣೆ ಸಂದರ್ಭ ಹೊಟೇಲ್‌, ಮನೆ ಸಹಿತ ಒಟ್ಟು 33 ಕಡೆ ಕಾರ್ಯಾಚರಣೆ ನಡೆಸಲಾಗಿತ್ತು. ಇದರಲ್ಲಿ 3 ಘೋರ ಹಾಗೂ 1 ಸಾಮಾನ್ಯ ಪ್ರಕರಣ ದಾಖಲಿಸಲಾಗಿತ್ತು. ಈ ವೇಳೆ 68,046 ರೂ. ಮೌಲ್ಯದ 113.410 ಲೀಟರ್‌ ಅಕ್ರಮ ಬಿಯರ್‌ ಮತ್ತು 23.30 ಲೀಟರ್‌ ಮದ್ಯ ವಶಪಡಿಸಿಕೊಂಡು ನಾಶಪಡಿಸಲಾಗಿದೆ.
ಇಲಾಖೆಗಿಲ್ಲ ಸ್ವಂತ ಕಟ್ಟಡ
ಸರಕಾರಕ್ಕೆ ಅತಿ ಹೆಚ್ಚು ಆದಾಯ ತರುವ ಅಬಕಾರಿ ಇಲಾಖೆಗೆ ಇನ್ನೂ ಸ್ವಂತ ಕಟ್ಟಡವಿಲ್ಲ. ಕಳೆದ 10 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿದೆ. ಮತ್ತೊಂದೆಡೆ ಅಬಕಾರಿ ವಾಹನ 3 ಲಕ್ಷ ಕಿ.ಮೀ. ಸಂಚರಿಸಿದ್ದು, ಯಾವುದೇ ಸಮಯದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸರಕಾರ ಇತ್ತ ಗಮನ ಹರಿಸಬೇಕಾಗಿದೆ.
ಅನುಮತಿ ಪಡೆದಲ್ಲಿ ಲೈಸನ್ಸ್‌
ಚುನಾವಣೆ ನೀತಿ ಸಂಹಿತೆ ಇರುವುದರಿಂದ ಮದ್ಯ ಸಾಗಾಟ ವೇಳೆ ಕಡ್ಡಾಯವಾಗಿ ಬಿಲ್‌ ಪಡೆದಿರಬೇಕು. ಅಕ್ರಮ ಮದ್ಯ ಪತ್ತೆಯಾದಲ್ಲಿ ಕಾನೂನು ಕ್ರಮ ಕೈಗೊಂಡು ಶಿಕ್ಷೆಗೆ ಗುರಿಪಡಿಸಲಾಗುವುದು. ಮದುವೆ ಸಹಿತ ಮನೆ ಕಾರ್ಯಕ್ರಮಗಳಿಗೆ ಮದ್ಯ ದಾಸ್ತಾನು ಮಾಡುವವರು ಅಬಕಾರಿ ಇಲಾಖೆಯಿಂದ ಅನುಮತಿ ಪಡೆದಲ್ಲಿ ಲೈಸನ್ಸ್‌ ನೀಡಲಾಗುತ್ತದೆ ಎಂದು ಅಬಕಾರಿ ನಿರೀಕ್ಷಕ ಗಿರೀಶ್‌ ಎಚ್‌.ಕೆ. ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next