Advertisement

ಅಧ್ಯಕ್ಷರ ಆಯ್ಕೆಯಾಗದೆ ಸದಸ್ಯರಿಗೆ ಪೂರ್ಣಾಧಿಕಾರ ಅಲಭ್ಯ

10:07 AM Nov 10, 2018 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ಪ.ಪಂ. ಚುನಾವಣೆ ನಡೆದು ಹೊಸ ಸದಸ್ಯರು ಆಯ್ಕೆಯಾಗಿದ್ದರೂ ಅವರಿಗೆ ಪೂರ್ಣ ಅಧಿಕಾರ ಇನ್ನೂ ಸಿಕ್ಕಿಲ್ಲ. ಅಂದರೆ ಪಂ.ನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಇನ್ನೂ ದಿನಾಂಕ ನಿಗದಿಯಾಗದೇ ಇರುವುದರಿಂದ ಆಡಳಿತಾಧಿಕಾರಿಯವರ ಅವಧಿಯೇ ಮುಂದುವರಿದಿದೆ.

Advertisement

ಪಂ.ನ ಚುನಾವಣೆಯ ಫಲಿತಾಂಶ ಅ. 31ಕ್ಕೆ ಪ್ರಕಟಗೊಂಡಿದ್ದು, ಬಿಜೆಪಿಯು 7 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತ ಪಡೆದಿದ್ದರೆ, ಕಾಂಗ್ರೆಸ್‌ 4 ಸ್ಥಾನಗಳನ್ನು ಪಡೆದಿದೆ. ವಿಶೇಷವೆಂದರೆ ಬಿಜೆಪಿಯು ಇಲ್ಲಿ ಇದೇ ಮೊದಲ ಬಾರಿಗೆ ಸ್ಪಷ್ಟ ಬಹುಮತ ಪಡೆದಿದೆ. ಹೊಸ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯು ವಿಳಂಬವಾದಲ್ಲಿ ಅಭಿವೃದ್ಧಿಗೂ ಹೊಡೆತ ನೀಡಲಿದೆ.

ಬೆಳ್ತಂಗಡಿ ತಹಶೀಲ್ದಾರ್‌ ಅವರು ಆಡಳಿತಾಧಿಕಾರಿಯಾಗಿ ಅಧ್ಯಕ್ಷರ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಹಾಲಿ ನಡೆಯುತ್ತಿರುವ ಕಾಮಗಾರಿಗಳಿಗೆ ತೊಂದರೆ ಇಲ್ಲದಿದ್ದರೂ ಹೊಸ ಕಾಮಗಾರಿಗಳನ್ನು ನಡೆಸುವುದು ಅಸಾಧ್ಯ. ಜತೆಗೆ ಪಂ. ವ್ಯಾಪ್ತಿಯ ಜನತೆಯ ಬೇಡಿಕೆಗಳೇನು ಎಂಬುದು ಕೂಡ ತಹಶೀಲ್ದಾರ್‌ಗಿಂತಲೂ ಹೆಚ್ಚು ಸದಸ್ಯರಿಗೆ ತಿಳಿದಿರುತ್ತದೆ. ಹೀಗಾಗಿ ಸರಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಹೊಸ ಆಡಳಿತ ಮಂಡಳಿಯೇ ಬೇಕಾಗುತ್ತದೆ. ಹೀಗಾಗಿ ಹೊಸ ಆಡಳಿತ ಮಂಡಳಿ ಬರದೆ ಚುನಾವಣೆ ನಡೆದರೂ ಯಾವುದೇ ಪ್ರಯೋಜನ ಇಲ್ಲದಂತಾಗುತ್ತದೆ. ಜಿಲ್ಲೆಯ ಇತರ ಕಡೆಗಳಲ್ಲಿ ನಡೆದ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಅದೇ ಪರಿಸ್ಥಿತಿ ಉಂಟಾಗಿದೆ.

ಮೀಸಲಾತಿ ಅಂತಿಮವೇ?
ಇತರ ನಗರ ಸ್ಥಳೀಯ ಸಂಸ್ಥೆಗಳ ಜತೆಗೆ ಕಳೆದ ಸೆಪ್ಟಂಬರ್‌ನಲ್ಲಿ ಸರಕಾರವು ಬೆಳ್ತಂಗಡಿಯ ಪ. ಪಂ.ನ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೂ ಮೀಸಲಾತಿ ತಂದಿದೆ. ಅದರ ಪ್ರಕಾರ ಅಧ್ಯಕ್ಷರ ಹುದ್ದೆ ಹಿಂದುಳಿದ ವರ್ಗ ಎ (ಬಿಸಿಎ) ಹಾಗೂ ಉಪಾಧ್ಯಕ್ಷರ ಹುದ್ದೆ ಸಾಮಾನ್ಯಕ್ಕೆ ಮೀಸಲಾಗಿದೆ.

ಇಲ್ಲಿ ಬಿಜೆಪಿಯು ಸ್ಪಷ್ಟ ಬಹುಮತ ಪಡೆದಿರುವ ಜತೆಗೆ ವಾರ್ಡ್‌ ಸಂಖ್ಯೆ 8ರಿಂದ ಗೆದ್ದಿರುವ ಬಿಜೆಪಿಯ ತುಳಸಿ ಅವರು ಅಧ್ಯಕ್ಷ ಹುದ್ದೆಗೆ ಅರ್ಹರಾಗಿದ್ದು, ಉಪಾಧ್ಯಕ್ಷ ಹುದ್ದೆಗೆ ಎಲ್ಲರೂ ಅರ್ಹರಾಗಿದ್ದಾರೆ. ಆದರೆ ಇತರ ಸ್ಥಳೀಯ ಸಂಸ್ಥೆಗಳ ಗೊಂದಲದಿಂದ ಬೆಳ್ತಂಗಡಿಯ ಮೀಸಲಾತಿಯೂ ಬದಲಾದಲ್ಲಿ ಬೇರೆಯವರಿಗೆ ಅವಕಾಶ ಸಿಗಬಹುದು.

Advertisement

ವಿಳಂಬ ಸಾಧ್ಯತೆ
ದ.ಕ. ಜಿಲ್ಲೆಯ ಪುತ್ತೂರು, ಬಂಟ್ವಾಳ ಹಾಗೂ ಉಳ್ಳಾಲಗಳಲ್ಲಿ ಚುನಾವಣೆ ಮುಗಿದು ಎರಡು ತಿಂಗಳುಗಳೇ ಕಳೆದರೂ ಇನ್ನೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಹೀಗಾಗಿ ಬೆಳ್ತಂಗಡಿ ಪ.ಪಂ.ನ ಆಯ್ಕೆಯೂ ವಿಳಂಬವಾಗುವ ಸಾಧ್ಯತೆ ಇದೆ.

ಸರಕಾರದ ತೀರ್ಮಾನ
ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ದಿನಾಂಕ ನಿಗದಿ ಸರಕಾರ ಮಟ್ಟದ ತೀರ್ಮಾನವಾಗಿದೆ. ಈ ಹಿಂದೆ ನಡೆದಿರುವ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯೂ ನಡೆಯಬೇಕಿದೆ. ಜತೆಗೆ ಹಾಲಿ ಬಂದಿರುವ ಮೀಸಲಾತಿಯೂ ಅಂತಿಮವೇ ಎಂಬುದನ್ನೂ ಸರಕಾರವೇ ತೀರ್ಮಾನಿಸಬೇಕಿದೆ.
– ಮದನ್‌ಮೋಹನ್‌ ಸಿ.
ತಹಶೀಲ್ದಾರರು, ಬೆಳ್ತಂಗಡಿ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next