ಬೆಳ್ತಂಗಡಿ: ಪಟ್ಟಣ ಪಂಚಾಯತ್‌ನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಸಂತೆ ಮಾರುಕಟ್ಟೆಯ ಹಸಿ ಮೀನು ಹಾಗೂ ಒಣಮೀನು ಮಾರುಕಟ್ಟೆ ಸಮೀಪ ತೆರೆದ ಚರಂಡಿಯಲ್ಲಿ ತ್ಯಾಜ್ಯ ನೀರು ಶೇಖರಣೆ ಜತೆಗೆ ಸ್ವಚ್ಛತೆಯಿಂದ ದೂರವಾಗಿದ್ದು ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತು ಉದಯವಾಣಿ ವರದಿ ಬೆನ್ನಲ್ಲೆ ಒಂದೇ ದಿನದಲ್ಲಿ ಅಗತ್ಯ ಕ್ರಮ ಕೈಗೊಂಡು ವ್ಯಾಪಾರಿಗಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತೆ ಆಡಳಿತದವರು ಮಾಡಿದ್ದಾರೆ.
ದಿನನಿತ್ಯ ಸಾವಿರಾರು ಜನರು ಭೇಟಿ ನೀಡುವ ಮೂಲಕ ಜನಜಂಗುಳಿ ಪ್ರದೇಶವಾಗಿರುವ ಬೆಳ್ತಂಗಡಿ ಸಂತೆ ಮಾರುಕಟ್ಟೆ ಪ್ರದೇಶದ ಚರಂಡಿ ನೀರು ಕಪ್ಪು ಬಣ್ಣಕ್ಕೆ ತಿರುಗಿತ್ತು. ಈ ಕುರಿತ ಉದಯವಾಣಿ ಸುದಿನದಲ್ಲಿ ಅ.17 ರಂದು ವರದಿ ಪ್ರಕಟಗೊಂಡ ತತ್ ಕ್ಷಣವೇ ಸ್ವಚ್ಛತೆ ನಡೆಸಿ ಹಸಿ ಮೀನು, ಮಾಂಸ ಮಾರಾಟದ ತ್ಯಾಜ್ಯದ ಪಿಟ್‌ನಿಂದ ಸಕ್ಕಿಂಗ್ ಯಂತ್ರದ ಮೂಲಕ ಸ್ವಚ್ಛತೆ ನಡೆಸಿದ್ದಾರೆ. ಜತೆಗೆ ಬ್ಲೀಚಿಂಗ್ ಪೌಡರ್ ಹಾಕಿ ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ನೀಡಿದರು.
ತೆರೆದ ಚರಂಡಿ ಮೇಲೆಯೇ ಒಣಮೀನು ವ್ಯಾಪಾರ ನಡೆಸುತ್ತಿದ್ದುದರಿಂದ ಸ್ವಚ್ಛತೆಯೂ ಕೈಗೊಳ್ಳದೆ ಸಮಸ್ಯೆ ಎದುರಾಗಿತ್ತು. ಹಾಗಾಗಿ ಮುಂದಿನ ದಿನಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪ.ಪಂ. ನಿಂದ ವ್ಯಾಪಾರಿಗಳಿಗೂ ಕಟ್ಟುನಿಟ್ಟಾದ ಸೂಚನೆ ನೀಡಲಾಗಿದೆ. ಈ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿ ಕೆಆರ್ ಡಿಐಎಲ್ ಹಸಿಮೀನು ಮಾರುಕಟ್ಟೆ ರಚಿಸಿತ್ತು. ಆದರೆ ಅದು ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಇದಕ್ಕೂ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪ.ಪಂ. ಮುಂದಾಗಿದೆ.
35 ಲಕ್ಷ ರೂ. ವೆಚದಲ್ಲಿ ವಾಣಿಜ್ಯ ಕಟ್ಟಡ
ಹಸಿಮೀನು ಮಾರುಕಟ್ಟೆಯ ತ್ಯಾಜ್ಯ ನೀರು ಸಂಗ್ರಹ ಪಿಟ್ ಕಿರಿದಾಗಿದ್ದರಿಂದ ಮಳೆಗಾಲ ಪೂರ್ಣಗೊಂಡ ಬಳಿಕ 3 ಲಕ್ಷ ರೂ. ಅನುದಾನದಲ್ಲಿ ಬೃಹತ್ ಪಿಟ್ ರಚಿಸಿ ತ್ಯಾಜ್ಯ ನೀರು ಶೇಖರಣೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮುಖ್ಯಮಂತ್ರಿ ಅಮೃತ್ ನಗರೋತ್ಥಾನ ಯೋಜನೆ 4ನೇ ಹಂತದ ಅನುದಾನದಡಿ 35 ಲಕ್ಷ ರೂ. ವೆಚ್ಚದಲ್ಲಿ ಸಂತೆ ಕಟ್ಟೆ ಪ್ರಾಂಗಣದ ಒಳಗಡೆ ವಾಣಿಜ್ಯ ಕಟ್ಟಡ ರಚಿಸಿ ಪ್ರತ್ಯೇಕ ಚರಂಡಿ ರಚಿಸಲಾಗುವುದು ಎಂದು ಪ.ಪಂ. ಉಪಾಧ್ಯಕ್ಷ ಜಯಾನಂದ ಗೌಡ ತಿಳಿಸಿದ್ದಾರೆ.