ಬೆಳ್ತಂಗಡಿ: ಸುಮಾರು 3.50 ಕೋ. ರೂ. ವೆಚ್ಚದಲ್ಲಿ ಬೆಳ್ತಂಗಡಿ ತಾ.ಪಂ. ಕಚೇರಿಯ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ ಎಂದು ಶುಕ್ರವಾರ ನಡೆದ ತಾ.ಪಂ. ವಿಶೇಷ ಸಭೆಯಲ್ಲಿ ತಿಳಿಸಲಾಯಿತು. ಸಭೆಯು ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂದಿನ 12 ತಿಂಗಳೊಳಗೆ ಈಗಿರುವ ತಾ.ಪಂ. ಹಳೆ ಕಟ್ಟಡ ಕೆಡವಿ ಅದೇ ಜಾಗದಲ್ಲಿ ಮೂರು ಮಹಡಿಗಳ ಸುಸಜ್ಜಿತ ಕಟ್ಟಡ ರಚನೆಯಾಗಲಿದೆ. ಕಟ್ಟಡ ನಿರ್ಮಾಣಕ್ಕೆ ಈಗಾಗಲೇ 1 ಕೋ. ರೂ. ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಎಂಜಿನಿಯರ್ ಸುಜಿತ್ ತಿಳಿಸಿದರು. ತಾ.ಪಂ. ಚಟುವಟಿಕೆಗಳಿಗೆ ಹೊಸ ವಾಹನಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಬರುವ ತನಕ ಖಾಸಗಿ ವಾಹನಕ್ಕಾಗಿ ಟೆಂಡರ್ ಕರೆಯುವ ಬಗ್ಗೆ ಅನುಮೋದನೆ ನೀಡಲಾಯಿತು.
ಅನುದಾನಕ್ಕೆ ಅನುಮೋದನೆ
2018-19ನೇ ಸಾಲಿನ ರೂ. 100.00 ಲಕ್ಷ ರೂ. ಅನುದಾನಕ್ಕೆ ಕ್ರಿಯಾ ಯೋಜನೆಯಂತೆ ಕಾಮಗಾರಿಗಳ ಪಟ್ಟಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ತಾ.ಪಂ. ವಿಶೇಷ ಘಟಕ ಯೋಜನೆಯಡಿಯಲ್ಲಿ ಪ.ಜಾತಿ ಕಾಲನಿಗಳ ಮೂಲ ಸೌಕರ್ಯಕ್ಕೆ 12 ಲಕ್ಷ ರೂ., ಗಿರಿಜನ ಉಪ ಯೋಜನೆಯಲ್ಲಿ ಪ.ಪಂ. ಕಾಲನಿಗಳ ಮೂಲ ಸೌಕರ್ಯಕ್ಕೆ 7 ಲಕ್ಷ ರೂ., ಎಸ್.ಜಿ.ಎಸ್. ವೈ. ಕಾಮಗಾರಿಗೆ 0.90ಲಕ್ಷ ರೂ., ಅಭಿವೃದ್ಧಿ ಅನುದಾನವಾಗಿ 2.98 ಲಕ್ಷ ರೂ., ರಸ್ತೆ ಮತ್ತು ಸೇತುವೆಗೆ 5.98 ಲಕ್ಷ ರೂ., ಆರೋಗ್ಯ ಇಲಾಖೆ ಕಟ್ಟಡ ನಿರ್ವಹಣೆಗೆ 9 ಲಕ್ಷ ರೂ., ಅಂಗನವಾಡಿ ಕಟ್ಟಡಗಳ ನಿರ್ವಹಣೆಗೆ 73.98 ಲಕ್ಷ ರೂ., ಗ್ರಾಮೀಣ ನೀರು ಪೂರೈಕೆ ದುರಸ್ತಿಗೆ 2.52 ಲಕ್ಷ ರೂ., ಗ್ರಾಮೀಣ ನೀರು ಪೂರೈಕೆಗೆ 0.67 ಲಕ್ಷ ರೂ., ಶಿಕ್ಷಣ ಇಲಾಖೆ ಕಟ್ಟಡ ನಿರ್ವಹಣೆಗೆ 17 ಲಕ್ಷ ರೂ. ಅನುದಾನಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್, ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿಯನ್, ಸ. ಲೆಕ್ಕ ಪರಿಶೋಧಕ ಗಣೇಶ್, ಸಂಯೋಜಕ ಜಯಾನಂದ ಉಪಸ್ಥಿತರಿದ್ದರು.