Advertisement

ಸಾಮರ್ಥ್ಯ ಸೌಧಕ್ಕೆ ತಾಲೂಕು ಪಂಚಾಯತ್‌ ಕಚೇರಿ ಸ್ಥಳಾಂತರ

10:44 AM May 19, 2019 | Naveen |

ಬೆಳ್ತಂಗಡಿ: ಶಿಥಿಲಾವಸ್ಥೆಗೆ ತಲುಪಿದ್ದ ಬೆಳ್ತಂಗಡಿ ತಾ.ಪಂ. ಕಟ್ಟಡ ನಿರ್ಮಾಣಕ್ಕೆ ಕೊನೆಗೂ 3.50 ಕೋ. ರೂ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ನೀತಿಸಂಹಿತೆ ಬಳಿಕ ಮಾಸಾಂತ್ಯದೊಳಗೆ ಹಳೆ ಕಟ್ಟಡ ಕೆಡವಿ ಅದೇ ಸ್ಥಳದಲ್ಲಿ ನೂತನ ಎರಡು ಅಂತಸ್ತಿನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಲಿದೆ.

Advertisement

ಈಗಾಗಲೇ ಹಾಲಿ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಸ್ಥಳಾವಕಾಶ ಕೊರತೆಯಿಂದ ನೂತನ ಕಟ್ಟಡ ನಿರ್ಮಿಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿತ್ತು. ಜನವರಿಯಲ್ಲೇ ಆರಂಭವಾಗಬೇಕಿದ್ದ ಕಾಮಗಾರಿ ಪ್ರಕ್ರಿಯೆ ತಾಂತ್ರಿಕ ಮಂಜೂ ರಾತಿ ಹಾಗೂ ಚುನಾವಣೆಗೆ ದಿನ ನಿಗದಿ ಯಾಗಿದ್ದರಿಂದ ತಡವಾಗಿತ್ತು. ಇದೀಗ ಎಲ್ಲವು ಸುಸೂತ್ರವಾಗಿ ನಡೆದಿದೆ.

ಈ ನಿಟ್ಟಿನಲ್ಲಿ ಶುಕ್ರವಾರದಿಂದಲೇ ಆಡಳಿತ ಶಾಖೆಯನ್ನು ತಾ.ಪಂ. ಹಿಂಭಾಗದ ಸಾಮರ್ಥ್ಯ ಸೌಧಕ್ಕೆ ಸ್ಥಳಾಂತರ ಗೊಳಿಸಲಾಗುತ್ತಿದೆ. ಈಗಾಗಲೇ ಸ್ಥಳಾಂತರ ಕೆಲಸ ಶೇ. 90 ಪೂರ್ಣ ಗೊಂಡಿದ್ದು, ವಿದ್ಯುತ್‌ ಸಂಪರ್ಕ ನೀಡಲಾಗು ತ್ತಿದೆ. ಸೋಮವಾರ ದೊಳಗೆ ಸ್ಥಳಾಂತರ ಕೆಲಸ ಪೂರ್ಣಗೊಳ್ಳಲಿದೆ. ಆಡಳಿತ ಶಾಖೆ ಜತೆ ಉದ್ಯೋಗ ಖಾತ್ರಿ (ನರೇಗಾ) ಕಚೇರಿಯನ್ನೂ ಸ್ಥಳಾಂತರಿಸ ಲಾಗಿದೆ. ಉಳಿದಂತೆ ಗೃಹರಕ್ಷಕ ದಳದ ಕಚೇರಿ ತಾ.ಪಂ. ಮುಂಭಾಗದ ಅಂಗಡಿ ಕೇಂದ್ರದಲ್ಲಿ ಕಾರ್ಯಾಚರಿಸಲಿದೆ.

ಸೋಲಾರ್‌ ಪ್ಯಾನಲ್ ಅಳವಡಿಕೆ
ಸಾಮರ್ಥ್ಯ ಸೌಧದ ತಾರಸಿಯಲ್ಲಿ ಸೋಲಾರ್‌ ಪ್ಯಾನಲ್ ಅಳವಡಿಸಿದ್ದು, ಅಗತ್ಯಕ್ಕೆ ಬೇಕಾದಷ್ಟು ವಿದ್ಯುತ್‌ ಬಳಕೆ ಮಾಡ ಲಾಗುತ್ತಿದೆ. ಹೆಚ್ಚುವರಿ ವಿದ್ಯುತ್‌ ಇತರ ಸರಕಾರಿ ಕಚೇರಿಗಳಿಗೆ ನೀಡುವ ವ್ಯವಸ್ಥೆ ಮೆಸ್ಕಾಂ ಮಾಡಿದ್ದು, ಪರ್ಯಾಯ ವಿದ್ಯುತ್‌ಗೆ ಆದ್ಯತೆ ನೀಡಲಾಗಿರುವುದು ಗಮನಾರ್ಹ.

ಕೊಠಡಿ ವಿಶೇಷ
ಕೊಠಡಿ ನಿರ್ಮಾಣಕ್ಕೆ ಎಂಜಿನಿಯರಿಂಗ್‌ ವಿಭಾಗದಿಂದ ಈಗಾಗಲೇ ನೀಲ ನಕಾಶೆ ಸಿದ್ಧಗೊಂಡಿದ್ದು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗೆ ಪ್ರತ್ಯೇಕ ಕೊಠಡಿ ಇರಲಿದೆ. ಇನ್ನುಳಿದಂತೆ ವೀಡಿಯೋ ಕಾನ್ಫರೆನ್ಸ್‌, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯೀ ಸಮಿತಿ ಅಧ್ಯಕ್ಷರಿಗೆ ಪ್ರತ್ಯೇಕ ಕೊಠಡಿಗಳು ನಿರ್ಮಾಣವಾಗಲಿವೆ ಎಂದು ಸಹಾಯಕ ಲೆಕ್ಕಾಧಿಕಾರಿ ಗಣೇಶ್‌ ಪೂಜಾರಿ ತಿಳಿಸಿದ್ದಾರೆ.

Advertisement

ರೂ. 3.50 ಕೋಟಿಯ ಜಿ ಪ್ಲಸ್‌ 2 ಕಟ್ಟಡ
ಒಟ್ಟು 3.50 ಕೋಟಿ ರೂ.ನಲ್ಲಿ ಪೀಠೊಪಕರಣ, ವಿದ್ಯುತ್‌ ಸಂಪರ್ಕ ಅಳವಡಿಕೆ ಸಹಿತ ಕಟ್ಟಡ ಸಂಪೂರ್ಣ ಕಾಮಗಾರಿ ಒಳಗೊಳ್ಳಲಿದೆ. ಶರೀಫ್‌ ಕನ್‌ಸ್ಟ್ರಕ್ಟರ್ ಕಟ್ಟಡ ನಿರ್ಮಾಣ ಜವಾಬ್ದಾರಿ ಪಡೆದಿದ್ದು, ಸುಮಾರು 19 ಸಾವಿರ ಚದರಡಿ ವಿಸ್ತೀರ್ಣದ ಎರಡು ಅಂತಸ್ತಿನ ಸುಂದರ ಕಟ್ಟಡವಿರಲಿದೆ. ನೆಲ ಅಂತಸ್ತು, ಮೊದಲ ಮಹಡಿ, ಎರಡನೇ ಅಂತಸ್ತು ತಲಾ 6,500 ಚದರಡಿ ಹೊಂದಿರಲಿದೆ.

ಅನುದಾನ
ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಕಟ್ಟಡ ಕಾಮಗಾರಿಗೆ ಸಿದ್ಧತೆ ಕೈಗೊಳ್ಳಲಾಗಿದ್ದು, ಅಗತ್ಯ ಕೆಲಸಕ್ಕಾಗಿ ಸಾಮರ್ಥ್ಯ ಸೌಧದಲ್ಲಿರುವ ಕಚೇರಿಗೆ ಭೇಟಿ ನೀಡಿ ಸಹಕರಿಸಬೇಕಿದೆ.
ಕೆ.ಇ. ಜಯರಾಂ
ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ

2 ವರ್ಷಗಳೊಳಗೆ ನೂತನ ಕಟ್ಟಡ
ಎರಡು ವರ್ಷಗಳೊಳಗೆ ನೂತನ ಕಟ್ಟಡ ನಿರ್ಮಾಣ ಗುರಿ ಹೊಂದಲಾಗಿದೆ. 2018-19ರಲ್ಲಿ 1 ಕೋಟಿ ರೂ. ಬಿಡುಗಡೆಗೊಂಡಿದ್ದು, 2019-20ರಲ್ಲಿ 2.50 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ. ಕಚೇರಿ ಸ್ಥಳಾಂತರಗೊಂಡ ತತ್‌ಕ್ಷಣವೇ ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. – ಚೆನ್ನಪ್ಪ ಮೊಲಿ ಎಇಇ,
ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗ, ಬೆಳ್ತಂಗಡಿ

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next