Advertisement

ಬೆಳ್ತಂಗಡಿ ಕ.ಸಾ. ಸಮ್ಮೇಳನ ಸರ್ವಾಧ್ಯಕರಾಗಿ ಪ.ರಾ. ಶಾಸ್ತ್ರಿ 

05:37 AM Jan 03, 2019 | |

ಬೆಳ್ತಂಗಡಿ: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಬೆಳ್ತಂಗಡಿ ತಾ| ಘಟಕದ ವತಿಯಿಂದ ಜ.16 ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ 16ನೇ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ(ಪ.ರಾ. ಶಾಸ್ತ್ರಿ) ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮತ್ತು ತಾಲೂಕು ಕಸಾಪ ಅಧ್ಯಕ್ಷ ಡಾ| ಬಿ. ಯಶೋವರ್ಮ ಅವರು ಪ್ರಕಟಿಸಿದ್ದಾರೆ.

Advertisement

ಆಗಿನ ಶಿಕ್ಷಣ ವ್ಯವಸ್ಥೆಯಲ್ಲಿ ನೇರವಾಗಿ 5ನೇ ತರಗತಿಗೆ ಶಾಲೆಗೆ ಸೇರಿದ್ದು, 11ನೇ ವರ್ಷದಲ್ಲೇ ಅವರ ಮೊದಲ ಲೇಖನ ಬೆಂಗಳೂರಿನ ಗೋಕುಲ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಮಚ್ಚಿನದಲ್ಲಿ ನೆಲೆಸಿದ ಬಳಿಕ ಬರಹಗಾರಿಕೆಯಲ್ಲಿ ತೊಡಗಿಸಿಕೊಂಡ ಅವರು ಈಗಾಗಲೇ ಒಟ್ಟು 72 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

11 ಸಾವಿರ ಲೇಖನ
ನಾಡಿನ ಸುಮಾರು 60ಕ್ಕೂ ಅಧಿಕ ದಿನಪತ್ರಿಕೆ, ನಿಯತಕಾಲಿಕ, ಪಾಕ್ಷಿಕ, ಮಾಸಿಕಗಳಲ್ಲಿ ಅವರ ಕೃಷಿ ಹಾಗೂ ವೈಚಾರಿಕ ಲೇಖನ, ಹಾಸ್ಯ ಲೇಖನ, ನುಡಿಚಿತ್ರ, ಕವನ, ಕಾದಂಬರಿ, ಸಾಧಕರ ಪರಿಚಯ ಸಹಿತ ವಿವಿಧ ವಿಚಾರಗಳ ಕುರಿತು ಒಟ್ಟು ಸುಮಾರು 11 ಸಾವಿರ ಲೇಖನಗಳು ಪ್ರಕಟಗೊಂಡಿವೆ.

ಮೂಲತಃ ಕಬಕ ಸಮೀಪದ ಪೋಳ್ಯ ನಿವಾಸಿಯಾಗಿರುವ ಪ.ರಾ. ಶಾಸ್ತ್ರಿಯವರು ಬಳಿಕ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ಕೆಲವು ವರ್ಷ ನೆಲೆಸಿ ಪ್ರಸ್ತುತ ಪತ್ನಿ ಶಾರದಾ ಅವರೊಂದಿಗೆ ತೆಂಕಕಾರಂದೂರು ಗ್ರಾಮದ ಪೆರಾಲ್ದರಕಟ್ಟೆಯಲ್ಲಿ ವಾಸವಾಗಿದ್ದಾರೆ.

‘ಪುದ್ವರ್‌’ಗೆ ಪಣಿಯಾಡಿ ಪ್ರಶಸ್ತಿ
ಅವರ ಬರಹಗಳಲ್ಲಿ ಸುಮಾರು 3 ಸಾವಿರದಷ್ಟು ಮಕ್ಕಳ ಕಥೆ ಒಳಗೊಂಡಿರುವುದು ಉಲ್ಲೇಖಾರ್ಹ. ಅವರ ತುಳು ಕಾದಂಬರಿ ಪುದ್ವರ್‌ಗೆ ಪಣಿಯಾಡಿ ಪ್ರಶಸ್ತಿ ಸಹಿತ ಇನ್ನೂ ಅನೇಕ ಕೃತಿಗಳಿಗೆ ಪ್ರಶಸ್ತಿಗಳು ಲಭಿಸಿವೆ. ಅವರ ಕಥೆ ಮಹಾರಾಷ್ಟ್ರ ಸರಕಾರದ ಮಾನ್ಯತೆಗೊಳಗಾಗಿ ಅಲ್ಲಿನ 5-6 ತರಗತಿ ಮಕ್ಕಳಿಗೆ ಪಠ್ಯವಾಗಿ ಈಗಲೂ ಬೋಧಿಸಲ್ಪಡುತ್ತಿದೆ. ಮಂಗಳೂರು ವಿವಿಯಿಂದಲೂ ಅವರ 3 ವೈಚಾರಿಕ ಲೇಖನಗಳನ್ನು ಸೇರಿಸಿದ ಬರಹ ಪದವಿ ವಿದ್ಯಾರ್ಥಿಗಳ ಪಠ್ಯವಾಗಿದೆ. ಅರಣ್ಯ ಇಲಾಖೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪರಿಸರ ಘೋಷಣೆಗೆ ರಾಷ್ಟ್ರಮಟ್ಟದ ಬಹುಮಾನ ಲಭಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next