ಬೆಳ್ತಂಗಡಿ : ಕಳೆದ ವಾರ (ಗುರುವಾರ) ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದ ವೇಳೆ ಸಾರ್ವಜನಿಕವಾಗಿ ಅಪ್ಪಿಕೊಂಡು ಮುತ್ತಿಟ್ಟ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.
ವಿದ್ಯಾರ್ಥಿ ಮುಸ್ಲಿಂ ಮತ್ತು ವಿದ್ಯಾರ್ಥಿನಿ ಹಿಂದೂ ಆಗಿರುವುದರಿಂದ ಪ್ರಕರಣ ಕೋಮು ತಿರುವು ಪಡೆದುಕೊಂಡಿದ್ದು, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ. ರೊಮ್ಯಾನ್ಸ್ ಮಾಡಿದ್ದಕ್ಕಾಗಿ ಪ್ರಶ್ನಿಸಿ ‘ಲವ್ ಜಿಹಾದ್’ ಎಂದು ಆರೋಪಿಸಿ ಹಿಂದೂ ಕಾರ್ಯಕರ್ತರು ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ವಿಷಯ ಕೋಮು ತಿರುವು ಪಡೆಯುತ್ತಿದ್ದಂತೆ ಖಾಸಗಿ ಕಾಲೇಜಿನ ಆಡಳಿತ ಮಂಡಳಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿದ್ಯಾರ್ಥಿಗಳ ಬಗ್ಗೆ ಆನ್‌ಲೈನ್‌ನಲ್ಲಿ ಪ್ರಚಾರ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಘಟನೆ ತಿಳಿದ ನಂತರ ಇಬ್ಬರೂ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ ಎಂದು ಕಾಲೇಜು ತಿಳಿಸಿದೆ. ಕಳೆದ ವಾರ ಬೆಳ್ತಂಗಡಿ ಪೇಟೆಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಗಣ್ಯರು ಭಾಗವಹಿಸಿದ್ದಾಗ ವಿದ್ಯಾರ್ಥಿಗಳು ಪ್ರಣಯದಲ್ಲಿ ತೊಡಗಿದ್ದರು.
ವಿದ್ಯಾರ್ಥಿನಿಯನ್ನು ಮಾತ್ರ ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿ ಆಕ್ರೋಶ ಹೊರ ಹಾಕಿದ್ದರು. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.