ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ಬುಧವಾರ ಸಂಜೆ ಮಳೆಯಾಗಿದ್ದು, ಬಿರುಗಾಳಿಯಿಂದ ವಿವಿಧೆಡೆ ಕೃಷಿಗೆ ಹಾನಿ ಉಂಟಾಗಿದೆ.
ಬುಧವಾರ ಬೆಳಗ್ಗಿನಿಂದ ತಾಲೂಕಿನಲ್ಲಿ ಬಿಸಿಲಿನ ವಾತಾವರಣವಿದ್ದು, ಸಂಜೆ 5 ಗಂಟೆ ಸುಮಾರಿಗೆ ತಾಲೂಕಿನ ಚಾರ್ಮಾಡಿ, ಮುಂಡಾಜೆ, ಕಡಿರುದ್ಯಾವರ, ತೋಟತ್ತಾಡಿ, ನೆರಿಯ, ಕಿಲ್ಲೂರು, ಕಾಜೂರು, ದಿಡುಪೆ ಮೊದಲಾದೆಡೆ ಸುಮಾರು ಅರ್ಧ ಗಂಟೆ ಕಾಲ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಉಜಿರೆ, ಧರ್ಮಸ್ಥಳ, ಕನ್ಯಾಡಿ-2ರಲ್ಲಿ ಅಲ್ಪ ಪ್ರಮಾಣದ ಮಳೆಯಾಗಿತ್ತು. ಬಿಸಿಲಿನಿಂದ ಕಂಗಾಲಾಗಿದ್ದ ಜನತೆಗೆ ಅಲ್ಪ ಪ್ರಮಾಣದ ಚೇತರಿಕೆ ಸಿಕ್ಕಿದೆ.
ಕಡಿರುದ್ಯಾವರ ಮೊದಲಾದೆಡೆ ಮಳೆ ಜತೆಗೆ ಬಿರುಗಾಳಿ ಬೀಸಿದ್ದರಿಂದ ರಬ್ಬರು ತೋಟ, ಬಾಳೆ ಗಿಡಗಳಿಗೆ ಹಾನಿಯುಂಟಾಗಿದೆ. ಗಾಳಿಯ ಪ್ರಮಾಣ ಹೆಚ್ಚಿದ್ದರಿಂದ ಟ್ಯಾಪಿಂಗ್ ಮಾಡುತ್ತಿದ್ದ ಕೆಲ ರಬ್ಬರ್ ಮರಗಳು ನೆಲಕಚ್ಚಿವೆ. ಗಜಂತೋಡಿ ಸುದರ್ಶನ್ ರಾವ್ ಅವರಿಗೆ ಸೇರಿದ ರಬ್ಬರು ತೋಟ ಹಾಗೂ ಬಾಳೆ ತೋಟಕ್ಕೆ ಹಾನಿಯಾಗಿದೆ.
ಟ್ರಾಫಿಕ್ ಜಾಮ್: ಕಲ್ಮಂಜ ಬಳಿ ಹೆದ್ದಾರಿಗೆ ಅಕೇಶಿಯಾ ಮರ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳೀಯರು ಮರ ತೆರವು ಮಾಡಿದ್ದರಿಂದ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ. ಮಠ ಲಕ್ಷ್ಮೀನರಸಿಂಹ ದೇವಸ್ಥಾನದ ಬಳಿ ಮರಬಿದ್ದ ಪರಿಣಾಮ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದೆ.
ತಾಲೂಕು ಕೇಂದ್ರದಲ್ಲಿಲ್ಲ ಮಳೆ: ತಾಲೂಕಿನ ವಿವಿಧೆಡೆ ಮಳೆ ಸುರಿದರೂ ತಾಲೂಕು ಕೇಂದ್ರವಾದ ಬೆಳ್ತಂಗಡಿ ಯಲ್ಲಿ ಸಂಜೆ ಮೋಡಕವಿದ ವಾತಾವರಣ ವಿದ್ದು ಸಿಡಿಲು, ಮಿಂಚು ಕಾಣಿಸಿತು. ಬಳಿಕ ಬಿಸಿಲು ಕಾಣಿಸಿಕೊಂಡಿತು.