Advertisement

ಬೆಳ್ತಂಗಡಿ ಪ.ಪಂ.: ಬಿಜೆಪಿಗೆ ಸ್ಪಷ್ಟ ಬಹುಮತ; ಕಾಂಗ್ರೆಸ್‌ಗೆ 4 ಸ್ಥಾನ

10:57 AM Nov 01, 2018 | |

ಬೆಳ್ತಂಗಡಿ: ಇಲ್ಲಿನ ಪ.ಪಂ. ಚುನಾವಣೆಯ ಮತ ಎಣಿಕೆ ಬುಧವಾರ ಪಂ. ಸಭಾಂಗಣದಲ್ಲಿ ನಡೆದಿದ್ದು, ಬಿಜೆಪಿ 7 ಸ್ಥಾನ ಗಳಿಸಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಕಾಂಗ್ರೆಸ್‌ 4 ಸ್ಥಾನ ಗಳಿಸಿದೆ. ಉಳಿದ ಯಾವುದೇ ಪಕ್ಷ ಖಾತೆ ತೆರೆದಿಲ್ಲ. ಬೆಳಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಪಂ.ನ ಸುತ್ತ ನೂರಾರು ಮಂದಿ ನೆರೆದಿದ್ದರು. ನಿಷೇಧಾಜ್ಞೆ ಜಾರಿಯಲ್ಲಿದ್ದುದರಿಂದ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಮತ ಎಣಿಕೆ ಕಾರ್ಯ ಆರಂಭಗೊಳ್ಳುತ್ತಿದ್ದಂತೆ ಒಂದನೇ ವಾರ್ಡ್‌ ನಲ್ಲಿ ಕಾಂಗ್ರೆಸ್‌ ಖಾತೆ ತೆರೆದಿತ್ತು.

Advertisement

8ನೇ ವಾರ್ಡ್‌ನ ಮತ ಎಣಿಕೆ ಅಂತ್ಯಗೊಳ್ಳುವ ಸಂದರ್ಭದಲ್ಲಿ ಕಾಂಗ್ರೆಸ್‌, ಬಿಜೆಪಿ ತಲಾ 4 ಸ್ಥಾನ ಪಡೆಯುವ ಮೂಲಕ ಸಮಬಲದ ಹೋರಾಟ ನಡೆಸಿತ್ತು. ಆದರೆ ಬಳಿಕದ ಮೂರೂ ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ಪಂ.ನಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಬಹುಮತ ಪಡೆಯಿತು. ಪಂ.ನ 6ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ 6 ಮತಗಳ ಅಂತರದಿಂದ ಗೆದ್ದಿದ್ದು, ಎಸ್‌ಡಿ ಪಿಐಯ ಅಭ್ಯರ್ಥಿ 2ನೇ ಸ್ಥಾನ ಪಡೆದಿದ್ದು, ಬಿಜೆಪಿ 3ನೇ ಸ್ಥಾನಕ್ಕೆ ಕುಸಿದಿದೆ. 10ನೇ ವಾರ್ಡ್‌ನಲ್ಲಿ ಬಿಜೆಪಿ ಗೆದ್ದಿದ್ದು, ಬಿಎಸ್‌ಪಿ ಅಭ್ಯರ್ಥಿ 2ನೇ ಸ್ಥಾನ ಪಡೆದು ಕಾಂಗ್ರೆಸ್‌ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. 11ನೇ ವಾರ್ಡ್‌ ನಲ್ಲೂ ಕಾಂಗ್ರೆಸ್‌ 3ನೇ ಸ್ಥಾನ ಪಡೆದಿದೆ. ಕಾಂಗ್ರೆಸ್‌ನಿಂದ ಬಂಡಾಯವೆದ್ದು, 8ನೇ ವಾರ್ಡ್‌ನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜನಾರ್ದನ ಬಂಗೇರ ಫಲಿತಾಂಶ ಪ್ರಕಟ ಗೊಂಡ ಕೆಲವೇ ತಾಸುಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಳಿಕ ಬಿಜೆಪಿ ವಿಜಯೋತ್ಸವದಲ್ಲೂ ಪಾಲ್ಗೊಂಡರು.

ವಿಜೇತರ ವಿಜಯೋತ್ಸವ
ವಿಜೇತರು ವಿಜಯೋತ್ಸವ ನಡೆಸಿದರು. ಬಿಜೆಪಿಯು ಬಸ್‌ ನಿಲ್ದಾಣದ ಬಳಿಯ ಪಕ್ಷದ ಕಚೇರಿಯಿಂದ ಸಂತೆಕಟ್ಟೆ ವರೆಗೆ ಮೆರವಣಿಗೆ ನಡೆಸಿತು. ಬಳಿಕ ಡಿಜೆ, ವಾಹನ ಜಾಥಾ ಮೂಲಕ ಸಾಗಿ ಶಾಸಕರ ಕಚೇರಿಯಲ್ಲಿ ಅಭಿನಂದನ ಸಭೆ ನಡೆಸಲಾಯಿತು. ಕಾಂಗ್ರೆಸ್‌ನ ವಿಜೇತರು ಮೂರು ಮಾರ್ಗದ ಬಳಿಯ ಪಕ್ಷದ ಕಚೇರಿಯಿಂದ ನಗರದಲ್ಲಿ ಪಾದಯಾತ್ರೆ ಮೂಲಕ ಸಾಗಿ, ಶಾಸಕ ವಸಂತ ಬಂಗೇರ ಅವರ ಕಚೇರಿಗೆ ತೆರಳಿದರು. ಎರಡೂ ಪಕ್ಷಗಳ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಂಗಬೆಟ್ಟು ತಾ.ಪಂ. ಉಪಚುನಾವಣೆ :ಬಿಜೆಪಿಗೆ ಜಯ
ಬಂಟ್ವಾಳ: ಸಂಗಬೆಟ್ಟು ತಾ.ಪಂ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಭಾಕರ ಪ್ರಭು 1,089 ಮತಗಳಿಂದ ವಿಜೇತರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ 3,939 ಮತಗಳನ್ನು, ಕಾಂಗ್ರೆಸ್‌ನ ದಿನೇಶ್‌ ಸುಂದರ ಶಾಂತಿ 2,850 ಮತಗಳನ್ನು ಪಡೆದರು. ಒಟ್ಟು 51 ನೋಟಾ ಮತಗಳು ಚಲಾವಣೆಯಾಗಿವೆ. ಕಳೆದ ಅವಧಿಯಲ್ಲಿ ಪ್ರಭಾಕರ ಪ್ರಭು ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 1,120 ಅಧಿಕ ಮತಗಳಿಂದ ವಿಜೇತರಾಗಿದ್ದರು. ಅನಂತರ ಬಂಟ್ವಾಳ ವಿಧಾನಸಭಾ ಕ್ಷೇತ್ರ ಚುನಾ ವಣೆ ಸಂದರ್ಭ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಉಪಚುನಾವಣೆ ಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಅ. 28ರಂದು ಚುನಾ ವಣೆ ನಡೆದಿತ್ತು. ಬಿ.ಸಿ. ರೋಡ್‌ ಮಿನಿ ವಿಧಾನಸೌಧದಲ್ಲಿ ಅ. 31ರಂದು ತಹಶೀಲ್ದಾರ್‌ ಪುರಂದರ ಹೆಗ್ಡೆ, ಚುನಾವಣಾಧಿಕಾರಿ ನಾರಾಯಣ ಶೆಟ್ಟಿ ಮತ್ತು ಸಿಬಂದಿ ಮತ ಎಣಿಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ
ರಾಜ್ಯ ಸರಕಾರವು ಸೆಪ್ಟಂಬರ್‌ನಲ್ಲಿ ಪ. ಪಂ. ಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಹೊರಡಿಸಿದ್ದು, ಅದರ ಪ್ರಕಾರ ಬೆಳ್ತಂಗಡಿ ಪ. ಪಂ.ನ ಅಧ್ಯಕ್ಷರ ಹುದ್ದೆ ಹಿಂ. ವರ್ಗ ಎ (ಬಿಸಿಎ), ಉಪಾಧ್ಯಕ್ಷರ ಹುದ್ದೆ ಸಾಮಾನ್ಯಕ್ಕೆ ಮೀಸಲಾಗಿದೆ. ಪ್ರಸ್ತುತ ಇಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿರುವುದರಿಂದ ಬಿಜೆಪಿಯಲ್ಲಿ ಗೆದ್ದಿರುವ ತುಳಸಿ ಅಧ್ಯಕ್ಷತೆಗೆ ಅರ್ಹತೆ ಪಡೆದಿದ್ದಾರೆ. ಕಾಂಗ್ರೆಸ್‌ನಲ್ಲಿ ರಾಜಶ್ರೀ ರಮಣ್‌, ಜಗದೀಶ್‌ ಡಿ. ಅವರಿಗೆ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಅರ್ಹತೆ ಪಡೆದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next