Advertisement

28 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

12:06 PM Oct 29, 2018 | |

ಬೆಳ್ತಂಗಡಿ: ಬೆಳ್ತಂಗಡಿ ಪ.ಪಂ.ಗೆ ರವಿವಾರ ಚುನಾವಣೆ ನಡೆದಿದ್ದು, ಅತ್ಯಂತ ಶಾಂತಿಯುತ ಮತದಾನವಾಗಿದೆ. ಪಂ.ನ 11 ವಾರ್ಡ್‌ಗಳಿಗೆ ಒಟ್ಟು 28 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಎಲ್ಲ ವಾರ್ಡ್‌ಗಳ ಮತಯಂತ್ರಗಳನ್ನೂ ಪಂ.ನ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಅ. 31ರಂದು ಪಂ. ಸಭಾಂಗಣದಲ್ಲಿಯೇ ಮತ ಎಣಿಕೆ ನಡೆಯಲಿದೆ.

Advertisement

ಬೆಳಗ್ಗೆ 7ಕ್ಕೆ ಆರಂಭಗೊಂಡ ಮತದಾನ ಪ್ರಕ್ರಿಯೆಗೆ ಮತದಾರರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮತ ಚಲಾಯಿಸಿ ತೆರಳಿದ್ದಾರೆ. ರಾಜಕೀಯ ಮುಖಂಡರು ಕೂಡ ಶಾಂತಿಯುತ ಮತದಾನಕ್ಕೆ ಸಹಕರಿಸಿದ್ದಾರೆ.

ಮುಖಂಡರ ಭೇಟಿ
ಶಾಸಕ ಹರೀಶ್‌ ಪೂಂಜ, ಮಾಜಿ ಶಾಸಕ ವಸಂತ ಬಂಗೇರ, ವಿಧಾನ ಪರಿಷತ್‌ ಸದಸ್ಯ ಹರೀಶ್‌ಕುಮಾರ್‌, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್‌ ಅವರು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ, ತಮ್ಮ ಕಾರ್ಯಕರ್ತರೊಂದಿಗೆ ಮತದಾನ ಪ್ರಕ್ರಿಯೆಯ ಕುರಿತು ಚರ್ಚಿಸಿದರು. ಜೆಡಿಎಸ್‌ ತಾಲೂಕು ಅಧ್ಯಕ್ಷ ಪ್ರವೀಣ್‌ ಚಂದ್ರ ಜೈನ್‌ ಅವರು ತಮ್ಮ ಅಭ್ಯರ್ಥಿಯ ಬೂತ್‌ನಲ್ಲೇ ಕುಳಿತಿದ್ದರು. ಪಂ.ನ ಚುನಾವಣಾ ವೀಕ್ಷಕಿ ಪ್ರಮೀಳಾ, ತಹಶೀಲ್ದಾರ್‌ ಮದನ್‌ಮೋಹನ್‌ ಸಿ., ಚುನಾವಣಾಧಿಕಾರಿ ಶಿವಪ್ರಸಾದ್‌ ಅಜಿಲ, ಸಹಾಯಕ ಚುನಾವಣಾಧಿಕಾರಿ ಸುಭಾಸ್‌ ಜಾಧವ್‌ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾನ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿದ್ದಾರೆ.

ಮದ್ಯ ಹಂಚಿದ ಆರೋಪ
ಮತದಾನದ ಮುನ್ನಾದಿನವಾದ ಅ. 28ರ ರಾತ್ರಿ ಕೆಲವೊಂದೆಡೆ ಮದ್ಯ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದರೂ ಅಂತಹ ಯಾವುದೇ ದೂರುಗಳು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯೋಜಿತ ಮತಗಟ್ಟೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಮತದಾನ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದ್ದಾರೆ.

ಪೊಲೀಸ್‌ ಬಂದೋಬಸ್ತ್
ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರವಿ ಬಿ.ಎಸ್‌. ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಕಾರ್ಯದಲ್ಲಿ ತೊಡಗಿದ್ದರು. ಸಂಜೆಯವರೆಗೂ ಯಾವುದೇ ಮತಗಟ್ಟೆಯಲ್ಲೂ ಹೆಚ್ಚಿನ ಸರತಿ ಸಾಲು ಕಂಡುಬಂದಿರಲಿಲ್ಲ. ಚರ್ಚ್‌ ರೋಡ್‌ ವಠಾರದಲ್ಲಿ ಮೂರು ಮತಗಟ್ಟೆಗಳಿದ್ದ ಕಾರಣ ಆ ಪ್ರದೇಶದಲ್ಲಿ ಮತಗಟ್ಟೆಯ ಹೊರಗಿನ ಪ್ರದೇಶದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಸೇರಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿತ್ತು. 

Advertisement

ಸಂಗಬೆಟ್ಟು ತಾ.ಪಂ. : ಶಾಂತಿಯುತ ಮತದಾನ
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಂಗಬೆಟ್ಟು ತಾ.ಪಂ.ನ ಸ್ಥಾನ ತೆರವಾಗಿದ್ದ ಹಿನ್ನೆಲೆಯಲ್ಲಿ ರವಿವಾರ ನಡೆದ ಉಪಚುನಾವಣೆಯ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಂತಿಯುತವಾಗಿ ನಡೆದಿದೆ. ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ತಾ.ಪಂ. ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಉಪ ಚುನಾವಣೆ ನಡೆದಿದೆ. ಬಿಜೆಪಿಯಿಂದ ಪ್ರಭಾಕರ ಪ್ರಭು ಹಾಗೂ ಕಾಂಗ್ರೆಸ್‌ನಿಂದ ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷ ದಿನೇಶ್‌ ಸುಂದರ ಶಾಂತಿ ಸ್ಪರ್ಧಿಸಿದ್ದರು. ಮಹಿಳೆಯರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿರುವುದು ಕಂಡು ಬಂತು. ರವಿವಾರ ಹಲವು ಶುಭ ಕಾರ್ಯಕ್ರಮಗಳಿದ್ದ ಕಾರಣ ಮಧ್ಯಾಹ್ನದವರೆಗೆ ಮತದಾನ ವಿರಳವಾಗಿತ್ತು.

ಮಧ್ಯಾಹ್ನ ಬಳಿಕ ಬಿರುಸು
ಮತದಾನ ಕೇಂದ್ರದ ಹೊರಗಡೆ ಅಭ್ಯರ್ಥಿಗಳ ಪರ ಕಾರ್ಯಕರ್ತರು ಪ್ರಚಾರ ನಡೆಸುತ್ತಿರುವುದು ಕಂಡು ಬಂತು. ಹತ್ತಿರದ ಅಂಗಡಿ ಮುಂಗಟ್ಟುಗಳಲ್ಲಿಯೂ ಕಾರ್ಯಕರ್ತರು ಅಭ್ಯರ್ಥಿ ಪರ ಮತ ಚಲಾಯಿಸುವಂತೆ ವಿನಂತಿಸುವುದು ಕಂಡುಬಂತು. ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಲ್ಲಿದ್ದುದರಿಂದ ಅಭ್ಯರ್ಥಿಗಳ ಭಾವಚಿತ್ರದ ಬ್ಯಾನರ್‌ಗಳು, ಪಕ್ಷದ ಚಿಹ್ನೆಯ ಬಂಟಿಂಗ್‌ಗಳು ಕಂಡು ಬರಲಿಲ್ಲ. ಮಧ್ಯಾಹ್ನದ ಬಳಿಕ ಮತದಾನ ಬಿರುಸಿನಿಂದ ನಡೆಯಿತು. ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರ ಮಾಡಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು. ಪಕ್ಷಗಳ ವಿವಿಧ ಮುಖಂಡರು ಬೂತ್‌ಗಳಿಗೆ ಭೇಟಿ ನೀಡಿ ಕಾರ್ಯಕರ್ತರಿಗೆ ಉತ್ತೇಜನ ನೀಡುತ್ತಿರುವುದು ಕಂಡು ಬಂತು. 

ಬಂದೋಬಸ್ತು
ಮತದಾನ ಶಾಂತಿಯುತವಾಗಿತ್ತು. ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ ಮತದಾನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರು ಕಾನೂನು ಸುವ್ಯವಸ್ಥೆಗೆ ಬಂದೋಬಸ್ತು ನಡೆಸಿದ್ದರು. 

 ಅತ್ಯಂತ ಖುಷಿ ನೀಡಿದೆ
ಚುನಾವಣೆ ದೇಶದ ಭವಿಷ್ಯ ಬರೆಯುವ ಕಾರ್ಯವಾಗಿದ್ದು, ಅದಕ್ಕಾಗಿ ಜೀವನದಲ್ಲಿ ಮೊದಲ ಬಾರಿಗೆ ಹಕ್ಕು ಚಲಾಯಿಸಿದ ತೃಪ್ತಿ ನನಗಿದೆ. ನಾನು ಮತ ಚಲಾಯಿಸಿದ ಅಭ್ಯರ್ಥಿಯ ಕುರಿತು ಹೆಚ್ಚಿನ ನಿರೀಕ್ಷೆಯಿದ್ದು, ಅವರು ಗೆದ್ದು ಬಂದರೆ ನಮ್ಮ ವಾರ್ಡ್‌ನ್ನು ಅಭಿವೃದ್ಧಿ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಒಟ್ಟಿನಲ್ಲಿ ಮೊದಲ ಮತದಾನ ಅತ್ಯಂತ ಖುಷಿ ನೀಡಿದೆ. 
– ಅರೋಲಿನ್‌ ಡಿ’ಸೋಜಾ,
ಕೆಇಬಿ ರೋಡ್‌ ವಿದ್ಯಾರ್ಥಿನಿ

ಹೆಚ್ಚಿನ ನಿರೀಕ್ಷೆ
ತಾನು ವಿದೇಶದಲ್ಲಿದ್ದ ಕಾರಣ ಕಳೆದ ಎಂಎಲ್‌ಎ ಚುನಾವಣೆ ಯಲ್ಲಿ ಮತ ಚಲಾವಣೆಯನ್ನು ಮಿಸ್‌ ಮಾಡಿದ್ದು, ನನ್ನ ಸ್ವೇಹಿತರು ಎಲ್ಲರೂ ಮತ ಹಾಕಿದ್ದರು. ಹೀಗಾಗಿ ಪಂ. ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಹಾಕುವ ಅವಕಾಶ ಸಿಕ್ಕಿದೆ. ನಾನು ಮತ ಚಲಾಯಿಸಿದ ಅಭ್ಯರ್ಥಿಯ ಕುರಿತು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಅದನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆ.
ಆಶ್ಲೆನ್‌ ಡಿ’ಸೋಜಾ
 ಚರ್ಚ್‌ ರೋಡ್‌

Advertisement

Udayavani is now on Telegram. Click here to join our channel and stay updated with the latest news.

Next