Advertisement

Belthangady: ನೆರಿಯ ಪ್ಲಾಂಟೇಷನ್‌ ಜಮೀನು ದಶಕಗಳ ವಿವಾದಕ್ಕೆ ತೆರೆ 

12:51 AM Jul 06, 2024 | Team Udayavani |

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಎಸ್ಟೇಟ್‌ ರೂರಲ್‌ ಇಂಡಸ್ಟ್ರಿ ಅಸೋಸಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ಸೇರಿದ ಪ್ಲಾಂಟೇಷನ್‌ ಲ್ಯಾಂಡ್‌ (ತೋಟದ ಜಮೀನು)ಗೆ ಸಂಬಂಧಿಸಿದ ದಶಕಗಳ ವಿವಾದಕ್ಕೆ ಹೈಕೋರ್ಟ್‌ ತೆರೆ ಎಳೆದಿದ್ದು, ಈ ಜಮೀನನ್ನು ತನ್ನ ಸ್ವಾಧೀನದಲ್ಲಿಟ್ಟುಕೊಳ್ಳಲು ಸಂಸ್ಥೆಗೆ ಕಾನೂನಿನ ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದೆ.

Advertisement

ನೆರಿಯ ಎಸ್ಟೇಟ್‌ ರೂರಲ್‌ ಇಂಡಸ್ಟ್ರಿ ಅಸೋಸಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ಸೇರಿದ ಜಮೀನು ಸರಕಾರದ ಸ್ವಾಧೀನದಲ್ಲಿದೆ ಎಂದು ಹೇಳಲಿಕ್ಕಾಗದು ಎಂದು ಹೇಳಿರುವ ಹೈಕೋರ್ಟ್‌, ಈ ಜಮೀನಿನ ಮೇಲೆ ಸರಕಾರ ಯಾವುದೇ ಮಾಲಕತ್ವ ಅಥವಾ ಸ್ವಾಧೀನದ ಹಕ್ಕು ಹೊಂದುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ನ್ಯಾಯಾಲಯದ ನಿರ್ದೇಶನದಂತೆ ತಮ್ಮ ಜಮೀನನ್ನು ವಶಪಡಿಸಿಕೊಂಡು ಸರಕಾರದ ಸ್ವಾಧೀನಕ್ಕೆ ಒಪ್ಪಿಸಬೇಕು ಎಂದು ತಹಶೀಲ್ದಾರರಿಗೆ ಸೂಚನೆ ಕೊಟ್ಟು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ 2008ರ ಜ. 17ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ನೆರಿಯ ಎಸ್ಟೇಟ್‌ ರೂರಲ್‌ ಇಂಡಸ್ಟ್ರಿ ಅಸೋಸಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನೆರಿಯ ಗೋಪಾಲಕೃಷ್ಣ ಹೆಬ್ಟಾರ್‌ ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿತು. ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದು 2017ರ ಮೇ 29ರಂದು ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಮತ್ತು ಈ ಹಿಂದೆ ನ್ಯಾಯಾಲಯ ನೀಡಿದ್ದ ಆದೇಶದಂತೆ 2007ರ ಆಗಸ್ಟ್‌ 21ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.
ಮುಂದಿನ ಮೂರು ತಿಂಗಳಲ್ಲಿ ಮೇಲ್ಮನವಿದಾರರ ಹೆಸರನ್ನು ಕಂದಾಯ ದಾಖಲೆಗಳಲ್ಲಿ ಸೇರಿಸಬೇಕು ಎಂದೂ ಹೈಕೋರ್ಟ್‌ ಆದೇಶಿಸಿದೆ. ಮೇಲ್ಮನವಿದಾರರ ಪರ ಹಿರಿಯ ನ್ಯಾಯವಾದಿಗಳಾದ ಬಿ.ವಿ. ಆಚಾರ್ಯ ಮತ್ತು ಬಿ.ಎಲ್‌. ಆಚಾರ್ಯ ವಾದ ಮಂಡಿಸಿದ್ದರು.

ಭೂಸ್ವಾಧೀನದ ಹಕ್ಕು ಪ್ರತಿಪಾದಿಸಿ ಸಂಸ್ಥೆಯು ಅರ್ಜಿ ನಮೂನೆ-7 ಅನ್ನು ಸಲ್ಲಿಸಿತ್ತು. ಭೂ ಸುಧಾರಣ (ತಿದ್ದುಪಡಿ) ಕಾಯ್ದೆ 1974ರ ಸೆಕ್ಷನ್‌ (2) (34) ಪ್ರಕಾರ ಕಂಪೆನಿಗಳು ಭೂ ಹಿಡುವಳಿದಾರರು ಆಗುವಂತಿಲ್ಲ ಎಂಬ ಕಾರಣ ನೀಡಿ ಭೂ ನ್ಯಾಯ ಮಂಡಳಿ ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿ ನಮೂನೆ-7 ಅನ್ನು ತಿರಸ್ಕರಿಸಿದ್ದು ಸರಿಯೋ ತಪ್ಪೋ ಅನ್ನುವುದನ್ನು ನಿರ್ಧರಿಸುವ ಬದಲು ನ್ಯಾಯಾಲಯ ಜಮೀನು ಸರಕಾರಕ್ಕೆ ಸೇರಿದ್ದು ಎಂದು ಹೇಳಿತು.

Advertisement

ಜಮೀನಿನ ಸ್ವಾಧೀನದ ಹಕ್ಕು ನಿರ್ಧರಿಸುವ ಅಧಿಕಾರ ಭೂ ನ್ಯಾಯ ಮಂಡಳಿಗೆ ಮಾತ್ರ ಇರುವುದು. ಹಾಗಾಗಿ, ಜಮೀನಿನ ಸರಕಾರದ ಸ್ವಾಧೀನದ ಬಗ್ಗೆ ಹಿಂದಿನ ವ್ಯಾಜ್ಯಗಳಲ್ಲಿ ಏಕಸದಸ್ಯ ಮತ್ತು ವಿಭಾಗೀಯ ನ್ಯಾಯಪೀಠ ಹೇಳಿರುವುದನ್ನು ಸಾಂದರ್ಭಿಕ ಅಭಿಪ್ರಾಯ ಎಂದು ಪರಿಗಣಿಸಿ, ಸ್ವತಂತ್ರ ಅಭಿಪ್ರಾಯದ ಆಧಾರದಲ್ಲಿ ಈ ಮೇಲ್ಮನವಿಗೆ ಸಂಬಂಧಿಸಿದಂತೆ ತೀರ್ಪು ನೀಡಬೇಕಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next