ಬೆಳ್ತಂಗಡಿ: ಯುವಸಮೂಹವು ವಿನೂತನ ಸಾಧನೆ ಸಾಧ್ಯವಾಗಿಸಿಕೊಳ್ಳಲು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವಗಳು ಸಹಾಯಕವಾಗುತ್ತವೆ. ಈ ಹಿನ್ನೆಲೆಯಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ನಿರಂತರವಾಗಿ ವಿದ್ಯಾರ್ಥಿ ಸಮೂಹಕ್ಕೆ ಇಂತಹ ಕಾರ್ಯ ಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಯೋಜನ ನಿರ್ದೇಶಕ ಡಿ. ಶ್ರೇಯಸ್‌ಕುಮಾರ್ ಹೇಳಿದರು.
ಅವರು ಬುಧವಾರ ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರ ದಲ್ಲಿ ಆಯೋಜಿಸಿದ ಎರಡು ದಿನಗಳ ರಾಷ್ಟ್ರಮಟ್ಟದ ಅಂತರ್ ಕಾಲೇಜು ಶೈಕ್ಷಣಿಕ, ಸಾಂಸ್ಕೃತಿಕ ಉತ್ಸವ ಝೇಂಕಾರ- 2019 ಅನ್ನು ಉದ್ಘಾಟಿಸಿ ಮಾತನಾಡಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯ ದರ್ಶಿ ಡಾ| ಬಿ. ಯಶೋವರ್ಮ ಮಾತ ನಾಡಿ, ಕಲಿಕೆಯು ಜ್ಞಾನ ಮತ್ತು ಕೌಶಲ ವನ್ನು ಮಾತ್ರವಲ್ಲದೇ ಭಿನ್ನ ಗ್ರಹಿಕೆಯನ್ನು ರೂಪಿಸಿಕೊಳ್ಳುವುದಕ್ಕೂ ನೆರವಾಗುವಂಥ ಶೈಕ್ಷಣಿಕ ಪರಿಕಲ್ಪನೆ ರೂಪಿಸ ಬೇಕು. ವಿದ್ಯಾರ್ಥಿಗಳು ಭಿನ್ನ ಗ್ರಹಿಕೆ ಸಾಮರ್ಥ್ಯ ರೂಪಿಸಿಕೊಳ್ಳುವುದಕ್ಕೆ ನೆರವಾಗುವ ಉದ್ದೇಶದಿಂದ ಎಸ್‌ಡಿಎಂ ಸಂಸ್ಥೆ ಝೇಂಕಾರ ರಾಷ್ಟ್ರೀಯ ಶೈಕ್ಷಣಿಕ- ಸಾಂಸ್ಕೃತಿಕ ಉತ್ಸವದ ಯೋಜನೆ ರೂಪಿ ಸಿತು. ಕಲಿಯುವಾಗ ಜ್ಞಾನಾರ್ಜನೆ , ಅದಕ್ಕನುಗುಣವಾದ ಕೌಶಲ ರೂಢಿಸಿ ಕೊಳ್ಳುವುದು ಮುಖ್ಯವಾದುದು ಎಂದರು.
ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ| ಟಿ. ಎನ್. ಕೇಶವ್ ಅಧ್ಯಕ್ಷತೆ ವಹಿಸಿ ದ್ದರು. ಸೋನಿಯಾ ವರ್ಮ ಉಪಸ್ಥಿತರಿ ದ್ದರು. 30ಕ್ಕೂ ಅಧಿಕ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.
ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ| ಬಿ. ಗಣಪಯ್ಯ ಸ್ವಾಗತಿಸಿ, ಝೇಂಕಾರ ಸಂಯೋಜಕ ಸುವೀರ್ ಜೈನ್ ವಂದಿಸಿದರು. ವಿದ್ಯಾರ್ಥಿನಿ ಅನನ್ಯಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಡಾ| ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಮೌನಪ್ರಾರ್ಥನೆಯ ಮೂಲಕ ಸಂತಾಪ ಸೂಚಿಸಲಾಯಿತು.
ಜೀವನ ಶಿಕ್ಷಣ
ಶೈಕ್ಷಣಿಕ ಜೀವನ ಪೂರ್ಣಗೊಂಡ ಬಳಿಕ ಪಠ್ಯದ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳ ಕುರಿತ ನೆನಪುಗಳೂ ಮನಃಪಟಲದಲ್ಲಿ ಉಳಿದು ಬಿಡುತ್ತವೆ. ಪಠ್ಯೇತರ ಚಟುವಟಿಕೆಗಳು ಜೀವನ ಶಿಕ್ಷಣ ಕಲಿಸಿಕೊಡುತ್ತವೆ. ಆ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುತ್ತವೆ. ಅರ್ಥಪೂರ್ಣ ಸಾಧನೆ ನಿರೂಪಿತವಾಗುತ್ತದೆ.
– ಡಿ. ಶ್ರೇಯಸ್ ಕುಮಾರ್,
ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಯೋಜನ ನಿರ್ದೇಶಕರು