ಬೆಳ್ತಂಗಡಿ: ಕರಾವಳಿ ಭಾಗದ ಯುವ ಶಾಸಕರಲ್ಲಿ ಒಬ್ಬರಾಗಿರುವ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರಿಗೂ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ.
ಈ ಕುರಿತಾಗಿ ಸ್ವತಃ ಶಾಸಕ ಹರೀಶ್ ಪೂಂಜಾ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ಶಾಸಕ ಹರೀಶ್ ಪೂಂಜಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗಿನ ಪ್ರಾಥಮಿಕ ಸಂಪರ್ಕಿತರಲ್ಲಿ ಒಬ್ಬರಾಗಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ಜ್ವರದ ಲಕ್ಷಣ ಕಂಡುಬಂದ ಕಾರಣ ಪೂಂಜಾ ಅವರು ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದ ಸಂದರ್ಭದಲ್ಲಿ ಅವರಲ್ಲಿ ಈ ಸೋಂಕು ಪಾಸಿಟಿವ್ ಆಗಿರುವುದು ಕಂಡುಬಂದಿತ್ತು.
ಇದೀಗ ಜ್ವರ ಮಾತ್ರ ಇರುವುದರಿಂದ ಶಾಸಕ ಪೂಂಜಾ ಅವರು ತಮ್ಮ ಮನೆಯಲ್ಲೇ ಸ್ವಯಂ ನಿರ್ಬಂಧಕ್ಕೊಳಗಾಗಿದ್ದಾರೆ ಮತ್ತು ಶುಷ್ರೂಷೆಯನ್ನು ಪಡೆಯುತ್ತಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಶಾಸಕರನ್ನು ಭೇಟಿಯಾದವರು ಕ್ವಾರೆಂಟೈನ್ ನಲ್ಲಿದ್ದು ಎಚ್ಚರಿಕೆ ವಹಿಸುವಂತೆ ಶಾಸಕರು ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ವಿನಂತಿಸಿಕೊಂಡಿದ್ದಾರೆ.