ಬೆಳ್ತಂಗಡಿ: ಎಳನೀರು ಬಂಗಾರಪಲ್ಕೆ ಜಲಪಾತದಲ್ಲಿ ಸಂಭವಿಸಿದ ದುರಂತದಲ್ಲಿ ಕಣ್ಮರೆ ಯಾದ ಸನತ್ ಶೆಟ್ಟಿ ದೇಹ ಹೊರತೆಗೆಯಲು ಬುಧವಾರ ಜೆಸಿಬಿ ಕಾರ್ಯಾ ಚರಣೆಗಿಳಿದಿದೆ.
ಯುವಕ ನಾಪತ್ತೆಯಾಗಿ ಬುಧ ವಾರಕ್ಕೆ ಹತ್ತು ದಿನಗಳಾಗಿವೆ. ಈ ಮಧ್ಯೆ ಹತ್ತಾರು ಗೊಂದಲಗಳಿಗೂ ಆಸ್ಪದ ನೀಡುತ್ತಿದೆ. ಇಲ್ಲಿಯವರೆಗೆ ಬಂಡೆಯನ್ನು ತೆರವುಗೊಳಿಸುವ ಕಾರ್ಯ ಕ್ರಷರ್ ಹಾಗೂ ಮಾನವ ಶ್ರಮದಿಂದ ನಡೆದಿತ್ತು. ಗುರುವಾರದಿಂದ ಜೆಸಿಬಿ ಬಳಸಿ ಕಾರ್ಯಾಚರಣೆ ಮುಂದುವರಿಯಲಿದೆ.
ಜಲಪಾತ ತಲುಪಲು 300 ಮೀಟರ್ ಕಾಲುದಾರಿಯಿದ್ದಲ್ಲಿ ರಸ್ತೆ ನಿರ್ಮಿಸಿ ಜಿಸಿಬಿ ಸಾಗಲು ಪ್ರಯತ್ನ ನಡೆದಿದೆ. ಈ ಹಿಂದೆ ಘಟನಾ ಸ್ಥಳದಲ್ಲಿ ಮಣ್ಣಿನ ರಾಶಿಯಿಂದ ಜಿಸಿಬಿ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಪ್ರಸಕ್ತ ಮಣ್ಣು, ಕಲ್ಲು ತೆರವಾಗಿದ್ದರಿಂದ ನೆಲಮಟ್ಟದಲ್ಲಿ ಸಮತಟ್ಟಾಗಿದ್ದು, ಕಾರ್ಯಾಚರಣೆ ಮತ್ತಷ್ಟು ಸುಲಭವಾಗಲಿದೆ.
ಗುರುವಾರ ಕಾರ್ಯಾಚರಣೆ ಮುಂದುವರಿಯಲಿದೆ. ಸನತ್ ದೇಹ ಸಿಗುವಲ್ಲಿವರೆಗೆ ಕಾರ್ಯಾಚರಣೆ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಕರಣದಲ್ಲಿ ಗೊಂದಲ
ಜ. 25ರಂದು ದುರ್ಘಟನೆ ಸಂಭವಿಸಿ ಫೆ. 4ಕ್ಕೆ 11 ದಿನಗಳಾಗಿವೆ. ಈ ನಡುವೆ ಹಲವು ಪ್ರಶ್ನೆಗಳು ಮೂಡಿವೆ. ಪ್ರಕರಣ ಸಂಭವಿಸಿದಾಕ್ಷಣ ಜತೆಗಿದ್ದವರ ಗಂಭೀರ ವಿಚಾರಣೆ ನಡೆಸಿಲ್ಲ. ಎಷ್ಟು ಮಂದಿ ಇದ್ದರು ಎಂಬುದು ಸ್ಪಷ್ಟವಾಗಿರಲಿಲ್ಲ. ಇನ್ನಷ್ಟು ಮಂದಿ ಇದ್ದರೇ ಎಂಬ ಸಂಶಯ ಸನತ್ ಮನೆಮಂದಿಯಲ್ಲಿದೆ. ಮತ್ತೊಂದೆಡೆ ಸನತ್ ಪಾದರಕ್ಷೆ ಮೊದಲ ದಿನವೇ ಸಿಕ್ಕಿತ್ತು. ಈಗ ಮಣ್ಣು ಶೇ. 90 ತೆರವಾಗಿದೆ. ಜತೆಗಿದ್ದವರು ತಿಳಿಸಿದ ಸ್ಥಳದಲ್ಲಿಯಾಗಲೀ ಅಕ್ಕಪಕ್ಕವಾಗಲೀ ದೇಹ ಈವರೆಗೆ ಪತ್ತೆಯಾಗಿಲ್ಲ. ಫಾಲ್ಸ್ ಆಳ ತಲುಪಿದ್ದರೂ ದೇಹ ಸಿಗದಿರುವುದು ಹಲವು ಊಹಾಪೋಹಗಳಿಗೆ ಆಸ್ಪದ ನೀಡಿದೆ.