ಬೆಳ್ತಂಗಡಿ: ಮಲವಂತಿಗೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗೋ ಸಾಗಾಟವನ್ನು ಸ್ಥಳೀಯರ ಸಹಕಾರದೊಂದಿಗೆ ಪತ್ತೆಹಚ್ಚಿದ ಬೆಳ್ತಂಗಡಿ ಪೊಲೀಸರು ಎರಡು ಪಿಕಪ್ ವಾಹನಗಳನ್ನು ಹಾಗೂ ಐದು ದನಗಳನ್ನು ವಶಪಡಿಸಿಕೊಂಡು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಚಿಬಿದ್ರೆ ಗ್ರಾಮದ ಪೆರಿಯಡ್ಕ ನಿವಾಸಿ ಯತೀಂದ್ರ (24), ತೋಟತ್ತಾಡಿ ಗ್ರಾಮದ ಬೆಂದ್ರಾಳ ನಿವಾಸಿ ಅರವಿಂದ (30), ಚಾರ್ಮಾಡಿ ಗ್ರಾಮದ ನಿವಾಸಿ ಉಸ್ಮಾನ್ (36), ಚಿಬಿದ್ರೆ ಗ್ರಾಮದ ನಿವಾಸಿ ಆರಿಫ್ (27) ಎಂಬವರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ದಿಡುಪೆ ರಸ್ತೆಯಲ್ಲಿ ಅಕ್ರಮವಾಗಿ ಪಿಕಪ್ ವಾಹನದಲ್ಲಿ ದನಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಗುರುವಾರ ರಾತ್ರಿಯ ವೇಳೆ ಬೆಳ್ತಂಗಡಿ ಪೊಲೀಸರು ಮಲವಂತಿಗೆ ಗ್ರಾಮದ ಕಜಕೆ ಎಂಬಲ್ಲಿ ಎಳನೀರು ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದಾಗ ಎರಡು ಪಿಕಪ್ ವಾಹನಗಳಲ್ಲಿ ಐದು ದನಗಳನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ವಾಹನದಲ್ಲಿ ಇದ್ದವರ ಬಳಿ ದನಗಳ ಸಾಗಾಟಕ್ಕೆ ಯಾವುದೇ ಪರವಾನಿಗೆಗಳು ಇಲ್ಲದಿರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ದನಗಳನ್ನು ಮಾಂಸ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಎರಡು ಪಿಕಪ್ ವಾಹನಗಳನ್ನು ಹಾಗೂ ಐದು ಹಸುಗಳನ್ನು ವಶಕ್ಕೆ ಪಡೆದುಕೊಂಡು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.